ಮಂಗಳೂರು: ಎಟಿಎಂ ಸ್ಕಿಮ್ಮಿಂಗ್ ಪ್ರಕರಣದ ಆರೋಪಿಗಳು ಪೊಲೀಸ್ ಕಸ್ಟಡಿಗೆ

Update: 2021-02-28 12:42 GMT
ಎಟಿಎಂ ಸ್ಕಿಮ್ಮಿಂಗ್ ಪ್ರಕರಣದ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳು

ಮಂಗಳೂರು, ಫೆ.28: ನಗರ ಹಾಗೂ ಹೊರವಲಯದ ಹಲವೆಡೆ ನಡೆದಿರುವ ಎಟಿಎಂ ಸ್ಕಿಮ್ಮಿಂಗ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಕೇರಳದ ಗ್ಲಾಡ್ವಿನ್ ಜಿಂಟೋ ಜಾಯ್ ಮತ್ತು ರಾಹುಲ್, ಹೊಸದಿಲ್ಲಿಯ ದಿನೇಶ್ ಸಿಂಗ್ ರಾವತ್ ಹಾಗೂ ಕಾಸರಗೋಡಿನ ಅಬ್ದುಲ್ ಮಜೀದ್ ಎಂಬವರನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಬಂಧಿತರು ಅಂತಾರಾಜ್ಯ ತಂಡದವರಾಗಿದ್ದು, ತಾವು ಕೃತ್ಯ ನಡೆಸುವ ನಗರಗಳಲ್ಲಿ ಸ್ಥಳೀಯವಾಗಿ ಕೆಲಸ ಮಾಡುವ ಯುವಕರನ್ನು ಸೇರಿಸಿಕೊಂಡು ಅವರಿಗೆ ಹಣ ನೀಡಿ ದುಷ್ಕೃತ್ಯ ನಡೆಸುತ್ತಿದ್ದರು. ಉಡುಪಿಯಲ್ಲಿ ನಡೆದಿರುವ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿಯೂ ಇವರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಶಶಿಕುಮಾರ್ ಹೇಳಿದರು.

ಅಂಚೆ ಇಲಾಖೆಯ ಎಟಿಎಂನಲ್ಲಿ ವಿದ್‌ಡ್ರಾ
ಆರೋಪಿಗಳು ನಗರದ ಹಲವು ಕಡೆ ಎಟಿಎಂ ಕೇಂದ್ರಗಳಲ್ಲಿ ಉಪಕರಣಗಳನ್ನಿಟ್ಟು ಎಟಿಎಂ ಕಾರ್ಡ್‌ಗಳ ಮಾಹಿತಿ (ಸ್ಕಿಮ್ಮಿಂಗ್) ಪಡೆದು ತಮ್ಮ ಬಳಿ ಇರುವ ಬೇರೆ ಕಾರ್ಡ್‌ಗಳಿಗೆ ಹಾಕಿ ದೇಶದ ವಿವಿಧ ನಗರಗಳಲ್ಲಿ ಹಣ ವಿದ್‌ಡ್ರಾ ಮಾಡಿದ್ದರು. ಆ ರೀತಿ ಹಣ ವಿದ್‌ಡ್ರಾ ಮಾಡಲು ಅಂಚೆ ಕಚೇರಿಗಳ ಎಟಿಎಂಗಳನ್ನು ಕೂಡ ಬಳಕೆ ಮಾಡಿದ್ದರು. ಬ್ಯಾಂಕ್‌ಗಳ ಎಂಟಿಎಂಗಳಲ್ಲಿ ಚಿಪ್ ಆಧಾರಿತ ಎಟಿಎಂ ಕಾರ್ಡ್‌ಗಳ ಬಳಕೆ ಇರುತ್ತದೆ. ಹಾಗಾಗಿ ಅಲ್ಲಿ ಹಣವಿದ್‌ಡ್ರಾ ಮಾಡುವುದು ಕಷ್ಟವಿರುವುದರಿಂದ ಆರೋಪಿಗಳು ಚಿಪ್ ಇಲ್ಲದ ಕಾರ್ಡ್‌ಗಳನ್ನು ಬಳಕೆ ಮಾಡಬಹುದಾದ ಅಂಚೆ ಕಚೇರಿಗಳ ಎಟಿಎಂಗಳಲ್ಲಿ ವಿದ್‌ಡ್ರಾ ಮಾಡಿದ್ದಾರೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.

ಉಪಕರಣಗಳ ಖರೀದಿ ಬಗ್ಗೆ ತನಿಖೆ
ಇದೊಂದು ದೊಡ್ಡ ತಂಡವಾಗಿದೆ. ಇವರು ಸ್ಕಿಮ್ಮಿಂಗ್ ಉಪಕರಣ ಎಲ್ಲಿಂದ ಖರೀದಿಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸಾಮಾನ್ಯವಾಗಿ ಇಂತಹ ಉಪಕರಣ ಸುಲಭವಾಗಿ ಸಿಗುವುದಿಲ್ಲ. ಅದನ್ನು ಅಳವಡಿಸುವುದಕ್ಕೆ ವಿಶೇಷ ಕೌಶಲ್ಯ ಬೇಕು. ಇದನ್ನು ಭಾರೀ ವ್ಯವಸ್ಥಿತವಾಗಿ ಮಾಡಲಾಗಿದೆ ಎಂದು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News