ಮರಳು ಅಕ್ರಮ ಸಾಗಾಟ ಪ್ರಕರಣ: ಇಬ್ಬರು ಬಾಲಕರ ಸಹಿತ ಮೂವರ ಬಂಧನ

Update: 2021-02-28 15:25 GMT

ಮಂಗಳೂರು, ಫೆ.28: ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್ ಅವರು ಶನಿವಾರ ಮುಂಜಾನೆ ಸ್ಕೂಟರ್‌ನಲ್ಲಿ ಮಾರುವೇಷದಲ್ಲಿ ತೆರಳಿ ತಲಪಾಡಿ ಟೋಲ್‌ಗೇಟ್‌ನಲ್ಲಿ ಮರಳು ಅಕ್ರಮ ಸಾಗಾಟ ಜಾಲವನ್ನು ಪತ್ತೆ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಅಲ್ಲದೆ ಇಬ್ಬರು ಬಾಲಕರ ಸಹಿತ ಮೂವರನ್ನು ಬಂಧಿಸಿದ್ದಾರೆ.

ಲಾರಿ ಚಾಲಕ ಸೂರಜ್, ಚಂದ್ರಹಾಸ, ರಾಕೇಶ್, ಸನಮ್ ಮತ್ತು ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟಿಪ್ಪರ್ ಲಾರಿ (ಕೆಎ 19 ಎಸಿ 3559)ಯ ಮಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಟಿಪ್ಪರ್ ಲಾರಿಯನ್ನು ಸ್ಕೂಟರ್‌ನಲ್ಲಿ ಹಿಂಬಾಲಿಸಿದರಲ್ಲದೆ ತಪಾಡಿ ಟೋಲ್ಗೇಟ್‌ನಲ್ಲಿ ಟಿಪ್ಪರ್ ಲಾರಿಯನ್ನು ಅಡ್ಡಗಟ್ಟಿ ಪ್ರಶ್ನಿಸಿದರು. ಲಾರಿ ಚಾಲಕ ಹೆದರಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಅಷ್ಟರಲ್ಲಿ ಹಿರಿಯ ಅಧಿಕಾರಿಗಳು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಪೊಲೀಸರು ಸ್ಥಳದಲ್ಲಿದ್ದ ಮೂವರನ್ನು ವಶಕ್ಕೆ ಪಡೆದರು.

ಮರಳು ಅಕ್ರಮ ಸಾಗಾಟದ ಟಿಪ್ಪರ್‌ಗೆ ಬೆಂಗಾವಲಾಗಿದ್ದ ಎರಡು ಕಾರುಗಳನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದಾಗ ಆರೋಪಿಗಳು ಪೊಲೀಸರನ್ನು ದೂಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಹಲ್ಲೆಗೈದು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಸೈ ನೀಡಿದ ದೂರಿನಂತೆ ಇಲ್ಯಾಸ್, ರಹೀಂ ಮತ್ತಿತರ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಆ ಬಳಿಕ ಪೊಲೀಸರು ಕೋಟೆಕಾರ್, ಬೀರಿ ಮತ್ತು ತಲಪಾಡಿ ಸಮೀಪದ ಅಜ್ಕಿನಡ್ಕದಲ್ಲಿ ಮರಳು ದಾಸ್ತಾನು ಮಾಡಿರುವುದನ್ನು ಪತ್ತೆ ಹಚ್ಚಿದರಲ್ಲದೆ ಮೂರು ಲಾರಿಗಳ ಸಹಿತ 12 ಲೋಡ್ ಮರಳನ್ನು ವಶಕ್ಕೆ ಪಡೆದಿದ್ದಾರೆ. ಈ ಮರಳನ್ನು ಕೇರಳಕ್ಕೆ ಅಕ್ರಮ ಸಾಗಾಟಕ್ಕೆ ಸಿದ್ಧತೆ ನಡೆಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News