ಕೇಂದ್ರ ಪುರಾತತ್ವ ಇಲಾಖೆ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿಲ್ಲ: ಕೆ.ಕೆ.ಮುಹಮ್ಮದ್

Update: 2021-02-28 13:34 GMT

ಉಡುಪಿ, ಫೆ.28: ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರದ ಪುರಾತತ್ವ ಇಲಾಖೆ ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ. ಅದು ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ದೇಶದ ಖ್ಯಾತನಾಮ ಪುರಾತತ್ವ ಶಾಸ್ತ್ರಜ್ಞರಲ್ಲಿ ಒಬ್ಬರಾದ ಪದ್ಮಶ್ರಿ ಪ್ರಶಸ್ತಿ ವಿಜೇತ ಕೇರಳ ಮೂಲದ ಕೆ.ಕೆ.ಮುಹಮ್ಮದ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಉಡುಪಿಯ ಡಾ.ಪಾದೂರು ಗುರುರಾಜ ಭಟ್ ಸ್ಮಾರಕ ಟ್ರಸ್ಟ್‌ನ ವತಿಯಿಂದ ನೀಡಲಾಗುವ 2021ನೇ ಸಾಲಿನ ಪ್ರತಿಷ್ಠಿತ ಡಾ.ಪಾದೂರು ಗುರುರಾಜ ಭಟ್ ಸ್ಮಾರಕ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಲಾಖೆ ಸಕ್ಷಮವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಇತ್ತು. ಆದರೆ ಅದು ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ಅಲ್ಲದೇ ಈಗ ಇಲಾಖೆಯ ಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ ಎಂದವರು ಹೇಳಿದರು.

ಬಿಜೆಪಿ ಸರಕಾರ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತದೆ ಎಂಬ ವಾತಾವರಣ ಸೃಷ್ಟಿಸಲಾಗಿತ್ತು. ಪ್ರಾಚ್ಯ ವಸ್ತುಗಳ ಸಂರಕ್ಷಣೆ ವಿಚಾರದಲ್ಲಿ ಇಲಾಖೆಯ ಈಗಿನ ಕೆಲಸ ಹಿಂದಿಗಿಂತಲೂ ಕಳಪೆಯಾಗಿದೆ. ಹೀಗಾಗಿ ಬಿಜೆಪಿ ಸರಕಾರವನ್ನು ನಾನು ಬಹಿರಂಗವಾಗಿಯೇ ಟೀಕಿಸುತ್ತಿದ್ದೇನೆ ಎಂದ ಅವರು, ಪುರಾತತ್ವ ಇಲಾಖೆಗೆ ಕಾಂಗ್ರೆಸ್ ಸರಕಾರಗಳು ಅತ್ಯುತ್ತಮ ಕೊಡುಗೆಯನ್ನು ನೀಡಿದ್ದವು ಎಂದರು.

ರಾಮಮಂದಿರ ವಿಚಾರವನ್ನು ವಿವಾದಿತ ಎನ್ನುವುದು ತಪ್ಪು. ಈಗ ಆ ಪ್ರಕರಣದಲ್ಲಿ ಯಾವುದೇ ವಿವಾದಗಳು ಉಳಿದಿಲ್ಲ. ಕೆಲವರು ವಾದವನ್ನು ಜೀವಂತ ಇರಿಸಲು ಪ್ರಯತ್ನಿಸುತ್ತಿರಬಹುದು. ಸುಪ್ರೀಂಕೋರ್ಟ್ ಈ ವಿವಾದವನ್ನು ಸಂಪೂರ್ಣವಾಗಿ ಬಗೆಹರಿಸಿದೆ. ಇನ್ನು ಯಾವುದೇ ಗೊಂದಲಕ್ಕೂ ಅವಕಾಶವಿಲ್ಲ ಎಂದವರು ಸ್ಪಷ್ಟ ಪಡಿಸಿದರು.

ಕರಾವಳಿಯ ಪ್ರಸಿದ್ಧ ಪುರಾತತ್ವ ಶಾಸ್ತ್ರಜ್ಞರೂ, ಇತಿಹಾಸಕಾರರೂ ಆಗಿದ್ದ ಡಾ.ಪಾದೂರು ಗುರುರಾಜ ಭಟ್ ನೆನಪಿನಲ್ಲಿ ನೀಡಿದ ತನಗೆ ಅತ್ಯಂತ ನೆಚ್ಚಿನದ್ದಾಗಿದೆ. ಇಷ್ಟೊಂದು ಭಾವನಾತ್ಮಕವಾಗಿ ನನಗೆ ಎಲ್ಲಿಯೂ ಗೌರವ ಸಿಕ್ಕಿಲ್ಲ. ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ನನಗೆ ಶಬ್ದಗಳೇ ಸಿಗುತ್ತಿಲ್ಲ ಎಂದು ಕೇಂದ್ರ ಸರಕಾರದಿಂದ ಪದ್ಮಶ್ರಿ ಪ್ರಶಸ್ತಿ ಪಡೆದಿರುವ ಮುಹಮ್ಮದ್ ಬಾವುಕರಾಗಿ ನುಡಿದರು.

'ಕಾಶಿ, ಮಥುರಾ ವಿವಾದಕ್ಕೆ ಅವಕಾಶವಿಲ್ಲ'
ರಾಮಜನ್ಮಭೂಮಿ- ಬಾಬ್ರಿ ಮಸೀದಿ ವಿವಾದದ ಮಾದರಿಯಲ್ಲಿ ಕಾಶಿ, ಮಥುರಾ ವಿವಾದವನ್ನು ಬಗೆಹರಿಸಲು ಸಾಧ್ಯವಿಲ್ಲ. 1991ರ ಪ್ರಾರ್ಥನಾ ಸ್ಥಳಗಳ ಕಾಯ್ದೆಯ ಅನ್ವಯ 1947ಕ್ಕೆ ಮೊದಲು ಇದ್ದ ಸ್ಥಿತಿಯನ್ನು ಈಗಿರುವ ಉಳಿದೆಲ್ಲಾ ವಿವಾದಗಳಲ್ಲೂ ಉಳಿಸಿಕೊಳ್ಳಬೇಕಾಗುತ್ತದೆ. ಅಯೋಧ್ಯೆ ಪ್ರಕರಣ ಈ ಕಾಯಿದೆಯಿಂದ ಹೊರತಾಗಿದೆ. ಹೀಗಾಗಿ ಸಾಂವಿಧಾನಿಕ ನಿಯಮಾವಳಿಗಳ ಪ್ರಕಾರ ಬೇರೆ ಯಾವುದೇ ದೇವಾಲಯಗಳಿಗೆ ಹೀಗೆ ಬೇಡಿಕೆ ಇಡುವಂತಿಲ್ಲ ಎಂದು ಡಾ.ಮುಹಮ್ಮದ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News