ಕೆ.ಕೆ.ಮುಹಮ್ಮದ್‌ಗೆ ‘ಡಾ.ಪಿ.ಗುರುರಾಜ್ ಭಟ್ ಪ್ರಶಸ್ತಿ’ ಪ್ರದಾನ

Update: 2021-02-28 13:53 GMT

ಉಡುಪಿ, ಫೆ.28: ಉಡುಪಿಯ ಡಾ.ಪಾದೂರು ಗುರುರಾಜ ಭಟ್ ಸ್ಮಾರಕ ಟ್ರಸ್ಟ್ ನೀಡುವ 2021ನೇ ಸಾಲಿನ ಪ್ರತಿಷ್ಠಿತ ಡಾ.ಪಾದೂರು ಗುರುರಾಜ ಭಟ್ ಸ್ಮಾರಕ ಪ್ರಶಸ್ತಿ’ಯನ್ನು ಖ್ಯಾತ ಪುರಾತತ್ವ ಶಾಸ್ತ್ರಜ್ಞ, ಭಾರತೀಯ ಪುರಾತತ್ವ ಇಲಾಖೆಯ ಉತ್ತರ ವಲಯದ ನಿವೃತ್ತ ನಿರ್ದೇಶಕ ಕೆ.ಕೆ.ಮುಹಮ್ಮದ್‌ರಿಗೆ ರವಿವಾರ ಪ್ರದಾನ ಮಾಡಲಾಯಿತು.

ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು 68 ವರ್ಷ ಪ್ರಾಯದ ಮುಹಮ್ಮದ್ ರಿಗೆ ಒಂದು ಲಕ್ಷ ರೂ. ನಗದು ಸಹಿತ ಪ್ರಶಸ್ತಿ, ಸ್ಮರಣಿಗೆ ಫಲಪುಷ್ಪಗಳನ್ನು ನೀಡಿ ಗೌರವಿಸಿದರು.

ಕೇಂದ್ರ ಪುರಾತತ್ವ ಇಲಾಖೆಯಲ್ಲಿದ್ದಾಗ ದೇಶಾದ್ಯಂತ ಸುಮಾರು 100 ದೇವಸ್ಥಾನಗಳ ಪುನರ್‌ನಿರ್ಮಾಣದಲ್ಲಿ ತಾನು ಭಾಗಿಯಾಗಿದ್ದೆ. ಅವುಗಳಲ್ಲಿ 80 ದೇವಾಲಯಗಳನ್ನು ಮಧ್ಯಪ್ರದೇಶದ ಭಯಾನಕ ಚಂಬಲ್ ಕಣಿವೆಯಲ್ಲೇ ಮತ್ತೆ ನಿರ್ಮಿಸಲಾಗಿತ್ತು. ಇದಕ್ಕಾಗಿ ಅಂದಿನ ಕುಪ್ರಸಿದ್ಧ ದರೋಡೆಕೋರ ನಿರ್ಭಯಸಿಂಗ್ ಗುಜ್ಜರ್‌ನ ಅನುಮತಿ ಪಡೆದಿದ್ದು, ರೋಚಕ ಅನುಭವ ಎಂದರು.

ಮಂಗಳೂರು ವಿವಿಯಲ್ಲಿ ಡಾ. ಪಾದೂರು ಗುರುರಾಜ್ ಭಟ್ ಅಧ್ಯಯನ ಪೀಠ ಸ್ಥಾಪನೆಯ ಬೇಡಿಕೆಗೆ ಪ್ರತಿಕ್ರಿಯಿಸಿದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸರಕಾರ ಈಗಾಗಲೇ ಅನೇಕ ಅಧ್ಯಯನ ಪೀಠಗಳನ್ನು ರಚಿಸಿದೆ. ಪೀಠಗಳ ಅಂಕಿ-ಸಂಖ್ಯೆ ಜಾಸ್ತಿಯಾಗಿದೆ. ಕೆಲವೊಂದು ಪೀಠ ಏನು ಕೆಲಸ ಮಾಡುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಪೀಠಕ್ಕೆ ಅಧಿಕಾರಿಗಳ ಅಭಾವವೂ ಇದೆ. ಈ ನಿಟ್ಟಿನಲ್ಲಿ ಮಂಗಳೂರು ವಿ.ವಿ.ಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಪೀಠ ವ್ಯವಸ್ಥಿತವಾಗಿ ನಡೆಯುವುದು ಖಾತ್ರಿಯಾದರೆ ವಾರದೊಳಗೆ ಗುರುರಾಜ್ ಭಟ್ ಅಧ್ಯಯನ ಪೀಠಕ್ಕೆ ಅನುದಾನ ಬಿಡುಗಡೆ ಮಾಡಲಾಗುದು ಎಂದು ಭರವಸೆ ನೀಡಿದರು.

ಶಾಸಕ ಕೆ. ರಘುಪತಿ ಭಟ್, ಮಂಗಳೂರು ವಿವಿ ನಿವೃತ್ತ ಕುಲಪತಿ ಪ್ರೊ.ಕೆ.ಭೈರಪ್ಪ, ಟ್ರಸ್ಟ್‌ನ ಅಧ್ಯಕ್ಷೆ ಪಿ. ಪಾರ್ವತಿ ಗುರುರಾಜ ಭಟ್ ಉಪಸ್ಥಿತರಿದ್ದರು. ಡಾ.ಪಾದೂರು ಗುರುರಾಜ್ ಭಟ್ ಮೆಮೋರಿಯಲ್ ಟ್ರಸ್ಟ್‌ನ ಪ್ರೊ.ಪಿ. ಶ್ರೀಪತಿ ತಂತ್ರಿ ಸ್ವಾಗತಿಸಿದರು. ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಹಿರಿಯ ಅಧಿಕಾರಿ ವಿದ್ಯಾಲಕ್ಷ್ಮೀ ಸನ್ಮಾನ ಪತ್ರ ವಾಚಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News