ಸೋಮವಾರ ಎರಡು ಗುಂಪುಗಳೊಂದಿಗೆ ಮಾತುಕತೆ: ಸಚಿವ ಕೋಟ

Update: 2021-02-28 15:33 GMT

ಉಡುಪಿ, ಫೆ.28: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶಿವರಾತ್ರಿ ಆಚರಣೆಗೆ ಸಂಬಂಧಿಸಿದಂತೆ ಎದ್ದಿರುವ ವಿವಾದದ ಕುರಿತು ಎರಡೂ ಗುಂಪುಗಳ ಕರೆದು ಸೋಮವಾರ ಮಾತುಕತೆ ನಡೆಸುವುದಾಗಿ ರಾಜ್ಯದ ಹಿಂದುಳಿದ ವರ್ಗ ಮತ್ತು ಹಿಂದೂ ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.

ರವಿವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ದೇವಸ್ಥಾನದಲ್ಲಿ ಶಿವರಾತ್ರಿ ಪೂಜಾ ಪದ್ಧತಿಯ ಬಗ್ಗೆ ಎರಡು ಗುಂಪುಗಳ ನಡುವೆ ಜಿಜ್ಞಾಸೆ ಮೂಡಿದೆ. ಸೋಮವಾರ ಎರಡೂ ಗುಂಪಿನರನ್ನು ಕರೆದು ಮಾತನಾಡುವೆ ಎಂದರು.

ಶಿವನ ಅಂಶ ಇರುವ ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆ ಮಾಡಲು ಇಲಾಖೆ ಸೂಚಿಸುತ್ತದೆ. ಕುಕ್ಕೆಯಲ್ಲಿ ಈ ಬಗ್ಗೆ ಚರ್ಚೆ ಇದ್ದರೆ ಆಗಮ ಪಂಡಿತರು ತೀರ್ಮಾನ ಕೈಗೊಳ್ಳುತ್ತಾರೆ. ದೇವಸ್ಥಾನ ಹಾಗೂ ಮುಜರಾಯಿ ಇಲಾಖೆಯ ಆಗಮ ಪಂಡಿತರು ತೀರ್ಮಾನ ಕೈಗೊಳ್ಳುತ್ತಾರೆ. ಅಷ್ಟಮಂಗಲದ ವಿಚಾರಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಗಮನಿಸುತ್ತದೆ. ನಮ್ಮ ಮೇಲೆ ಈ ವಿಚಾರವಾಗಿ ಯಾವುದೇ ಒತ್ತಡ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಕೊರೋನ ಎರಡನೆ ಅಲೆಯ ಬಗ್ಗೆ ಸರಕಾರ ಅತ್ಯಂತ ಜಾಗೃತವಾಗಿದೆ. ಕೊರೋನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಬಗ್ಗೆ ನಿಗಾ ವಹಿಸಿದ್ದೇವೆ. ಆರೋಗ್ಯ ಸಚಿವ ಸುಧಾಕರ್ ನಿರಂತರ ಸಭೆಗಳನ್ನು ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಜಾತ್ರೆ, ಉತ್ಸವಗಳು ಕೋವಿಡ್ ನಿಯಮಾವಳಿಗೆ ಒಳಪಟ್ಟೇ ನಡೆಯುತ್ತಿದೆ. ಕೊರೋನ ಕಡಿಮೆಯಾದ ನಂತರ ಜನರು ಜಾಸ್ತಿ ಭಾಗವಹಿಸಲು ಆರಂಭಿಸಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News