×
Ad

ರಕ್ತಪಾತಕ್ಕೆ ತಿರುಗಿದ ಮ್ಯಾನ್ಮಾರ್ ಪ್ರತಿಭಟನೆ

Update: 2021-02-28 21:08 IST

ಯಾಂಗೂನ್,ಫೆ.28: ಮ್ಯಾನ್ಮಾರ್‌ನಲ್ಲಿ ಸೇನಾ ಬಂಡಾಯದ ವಿರುದ ನಡೆಯುತ್ತಿರುವ ಪ್ರತಿಭಟನೆ ರವಿವಾರ ರಕ್ತಪಾತಕ್ಕೆ ತಿರುಗಿದ್ದು, ದೇಶದ ವಿವಿಧೆಡೆ ಪ್ರತಿಭಟನನಿರತರ ಮೇಲೆ ಪೊಲೀಸರ ನಡೆಸಿದ ಗೋಲಿಬಾರ್‌ಗೆ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ. ಇದರೊಂದಿಗೆ ಮ್ಯಾನ್ಮಾರ್‌ನಲ್ಲಿ ಸೇನಾಡಳಿತದ ವಿರುದ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಬಲಿಯಾದವರ ಸಂಖ್ಯೆ 18ಕ್ಕೇರಿದೆ.

‘‘ಮ್ಯಾನ್ಮಾರ್ ಈಗ ಯುದ್ಧಭೂಮಿಯಂತಾಗಿದೆ’’ ಎಂದು ಬೌದ್ದರು ಬಹುಸಂಖ್ಯಾತರಾಗಿರುವ ಈ ರಾಷ್ಟ್ರದ ಪ್ರಪ್ರಥಮ ಕ್ಯಾಥೊಲಿಕ್ ಕಾರ್ಡಿನಲ್ ಚಾರ್ಲ್ಸ್ ವೌಂಗ್ ಬೊ ಟ್ವೀಟಿಸಿದ್ದಾರೆ. ಮ್ಯಾನ್ಮಾರ್‌ನ ಅತಿ ದೊಡ್ಡ ನಗರವಾದ ಯಾಂಗೊನ್‌ನಲ್ಲಿ ಪ್ರತಿಭಟನನಿರತರನ್ನು ಚದುರಿಸಲು ಪೊಲೀಸರು ಸ್ಟನ್‌ಗ್ರೆನೆಡ್‌ಗಳನ್ನು ಎಸೆದಿದ್ದಾರೆ ಹಾಗೂ ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದರು ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ಉದ್ರಿಕ್ತ ಜನಸ್ತೋಮವನ್ನು ಚದುರಿಸಲು ಸಾಧ್ಯವಾಗದೆ ಇದ್ದಾಗ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರ ಜೊತೆ ಸೈನಿಕರನ್ನು ಕೂಡಾ ಸ್ಥಳದಲ್ಲಿ ನಿಯೋಜಿಸಲಾಗಿತ್ತೆಂದು ಮೂಲಗಳು ತಿಳಿಸಿವೆ.

  ಗುಂಡೆಸೆತದಿಂದಾಗಿ ರಸ್ತೆಗಳಲ್ಲಿ ರಕ್ತದ ಕಲೆಗಳು ಹರಡಿದ್ದು ಹಲವಾರು ಗಾಯಾಳುಗಳನ್ನು ಸಹ ಪ್ರತಿಭಟನಕಾರರು ಆಸ್ಪತ್ರೆಗಳಲ್ಲಿ ಕೊಂಡೊಯ್ಯುತ್ತಿರುವುದು ಕಂಡುಬರುತ್ತಿತ್ತು. ಎದೆಗೆ ಗುಂಡು ತಗಲಿದ್ದ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ಕರೆತಂದ ಬಳಿಕ ಕೊನೆಯುಸಿರೆಳೆದಿರುವುದಾಗಿ ಗುರುತು ಹೇಳಲಿಚ್ಚಿಸದ ವೈದ್ಯರೊಬ್ಬರು ತಿಳಿಸಿದ್ದಾರೆ

  ಯಾಂಗೊನ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಶಿಕ್ಷಕರ ಗುಂಪಿನ ಮೇಲೆ ಪೊಲೀಸರು ಸ್ಟನ್‌ಗ್ರೆನೇಡ್ ಎಸೆದಾಗ ಶಿಕ್ಷಕಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ದಕ್ಷಿಣ ಮ್ಯಾನ್ಮಾರ್‌ನ ದಾವೆಯ್‌ನಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ರಾಜಕೀಯ ಮುಖಂಡರಾದ ಕ್ಯಾವ್ ಮಿನ್ ಹಿಟಿಕೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪೊಲೀಸರು ಈಶಾನ್ಯ ಮ್ಯಾನ್ಮಾರ್‌ನ ಲಾಶಿಯೊ ಹಗಾಊ ಮಿಯೆಕ್ ನಗರಗಳಲ್ಲಿಯೂ ಪ್ರತಿಭಟೆಗಳನ್ನು ಬಗ್ಗು ಬಡಿಯುವ ಕಾರ್ಯಾಚರಣೆ ನಡೆಸಿರುವುದಾಗಿ ವರದಿಗಳು ತಿಳಿಸಿವೆ. ಈವರೆಗೆ ಮ್ಯಾನ್ಮಾರ್‌ನ ಸೇನಾ ದಂಗೆಯನ್ನು ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಹಾಗೂ ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾನೆ.

 ಮ್ಯಾನ್ಮಾರ್‌ನ ಸೇನೆಯು ಫೆಬ್ರವರಿ 1ರಂದು ಕ್ಷಿಪ್ರ ಕ್ರಾಂತಿ ಆಂಗ್ ಸಾನ್ ಸೂ ಕಿ ನೇತೃತ್ವದ ಸರಕಾರವನ್ನು ಪದಚ್ಯುತಗೊಳಿಸಿತ್ತು. ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸೂ ಕಿ ಅವರ ಪಕ್ಷವು ಅಕ್ರಮಗಳನ್ನು ಎಸಗಿರುವುದಾಗಿ ಸೇನೆಯು ಆರೋಪಿಸಿತ್ತು. ಸೂಕಿ ಪದಚ್ಯುತಿಯನ್ನು ವಿರೋಧಿಸಿ ದೇಶಾದ್ಯಂತ ನಾಗರಿಕರು ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದು ಸೇನಾಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಸೇನಾಡಳಿತದ ವಿರುದ್ಧ ಶಕ್ತಿಯಿರುವ ತನಕ ಹೋರಾಟ: ಮ್ಯಾನ್ಮಾರ್‌ನ ಉಚ್ಚಾಟಿತ ವಿಶ್ವಸಂಸ್ಥೆ ರಾಯಭಾರಿ ಘೋಷಣೆ

ಮ್ಯಾನ್ಮಾರ್‌ನ ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರಕಾರವನ್ನು ಮರುಸ್ಥಾಪಿಸುವುದಕ್ಕಾಗಿ ಅಗತ್ಯವಿರುವ ಎಲ್ಲಾ ಮಾರ್ಗಗಳನ್ನು ಬಳಸಬೇಕೆಂದು ಕರೆ ನೀಡಿದ್ದಕ್ಕಾಗಿ ಉಚ್ಚಾಟಿತರಾಗಿರುವ ಮ್ಯಾನ್ಮಾರ್‌ನ ವಿಶ್ವಸಂಸ್ಥೆಯ ರಾಯಭಾರಿ ಕ್ಯಾವ್ ಮೊ ತುನ್ ಅವರು,‘ನನಗೆ ಶಕ್ತಿ ಇರುವ ತನಕವೂ ನಾನು ಪ್ರತಿ ಹೋರಾಟ ನಡೆಸಲು ನಿರ್ಧರಿಸಿದ್ದೇನೆ’ ಎಂದು ಹೇಳಿದ್ದಾರೆ.

ದೇಶಕ್ಕೆ ದ್ರೋಹ ಬಗೆದಿದ್ದಕ್ಕಾಗಿ ಕ್ಯಾವ್ ಮೊ ತುನ್ ಅವರನ್ನು ಉಚ್ಚಾಟಿಸಲಾಗಿದೆ ಎಂದು ಮಿಲಿಟರಿ ನಿಯಂತ್ರಣದ ಮಾನ್ಮಾರ್‌ನ ಸರಕಾರಿ ಟಿವಿ ವಾಹಿನಿ ಶನಿವಾರ ವರದಿ ಮಾಡಿತ್ತು.

ಆದಾಗ್ಯೂ, ವಿಶ್ವಸಂಸ್ಥೆಯು ಮ್ಯಾನ್ಮಾರ್‌ನ ಸೇನಾಡಳಿತಕ್ಕೆ ಅಧಿಕೃತ ಮಾನ್ಯತೆಯನ್ನು ನೀಡದೆ ಇರುವುದರಿಂದ ವಿಶ್ವಸಂಸ್ಥೆಯ ರಾಯಭಾರಿ ಬದಲಾವಣೆ ಬಗ್ಗೆ ಅದು ಯಾವುದೇ ಅಧಿಕೃತ ಅಧಿಸೂಚನೆಯನ್ನು ಸ್ವೀಕರಿಸಿಲ್ಲವಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

   ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ಮ್ಯಾನ್ಮಾರ್‌ಗಾಗಿನ ವಿಶೇಷ ದೂತರಾದ ಕ್ರಿಸ್ಟೈನ್ ಶ್ಕ್ರಾನರ್ ಬುರ್ಗೆನರ್ ಅವರು ಮ್ಯಾನ್ಮಾರ್‌ನ ಸೇನಾಡಳಿತ (ಜುಂಟಾ)ಕ್ಕೆ ಮಾನ್ಯತೆ ನೀಡಬಾರದೆಂದು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News