ಆರ್‌ಟಿಐ ಕಾರ್ಯಕರ್ತನಿಗೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬಿಲ್ಲವ ಯುವ ವೇದಿಕೆಯಿಂದ ಮಾ.1 ರಂದು ಪ್ರತಿಭಟನೆ

Update: 2021-02-28 15:53 GMT

ಉಡುಪಿ, ಫೆ.28: ಸಮಾಜ ಸೇವಕ, ಆರ್‌ಟಿಐ ಕಾರ್ಯಕರ್ತ ಬಾರ್ಕೂರು ಶಂಕರ ಶಾಂತಿಯವರಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಮಾ.1ರಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಶಂಕರ ಶಾಂತಿಯವರಿಗೆ ಫೆ.20ರಂದು ಬಾರಕೂರು ದೇವಾಲಯದ ಸಭಾ ಭವನದ ಅಡುಗೆ ಕೋಣೆಯಲ್ಲಿ ಕೂಡಿ ಹಾಕಿ ಚಿತ್ರ ಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ರಸ್ತೆ ಸಾರಿಗೆ ಸುರಕ್ಷತೆ ವಿಷಯ, ಕಾಂಕ್ರೀಟ್ ರಸ್ತೆ ಕಳಪೆ ವಿಷಯ, ಬಾರಕೂರು ಜೈನ ಬಸದಿ ಆಕ್ರಮಣ ತೆರವು, ಹೊಸಾಳ ಗರಡಿಯಲ್ಲಿ ವೈದಿಕನೋರ್ವನ ಅನಾಚಾರ ಪ್ರಶ್ನೆ, ಇಂತಹ ಅನೇಕ ಜನಪರ ಸೇವೆಗಳಲ್ಲಿ ಇವರು ಮಾಡುತ್ತಿದ್ದರು. ಈ ತಪ್ಪುಗಳನ್ನು ಅನ್ಯಾಯಗಳನ್ನು ಪ್ರಶ್ನಿಸಿದ ಕಾರಣಕ್ಕೆ ಕೊಲೆ ಮಾಡುವ ಮಟ್ಟಕ್ಕೆ ತಲುಪಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತ. ಈ ಘಟನೆ ನಡೆದ ದಿನವೇ ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ ನಂತರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ವೇದಿಕೆ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ ಈವರೆಗೆ ಆರೋಪಿಗಳ ಬಂಧನ ಆಗಿಲ್ಲ ಎಂದು ವೇದಿಕೆ ಹೇಳಿಕೆಯಲ್ಲಿ ದೂರಿದೆ.

ಈ ಕುರಿತು ಸಮಾನ ಮನಸ್ಕರ ಸಭೆ ನಡೆಸಿ ಮಾ.1ರಂದು ಮಧ್ಯಾಹ್ನ 3 ಗಂಟೆಗೆ ಬನ್ನಂಜೆ ಬಿಲ್ಲವ ಸಭಾಭವನದಿಂದ ಹೊರಟು ಉಡುಪಿ ಎಸ್ಪಿ ಕಚೇರಿ ಮುಂಭಾಗದಲ್ಲಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಪ್ರವೀಣ್ ಎಂ.ಪೂಜಾರಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News