ಮಧ್ವಾಚಾರ್ಯರ ಕಾಲದಿಂದಲೂ ಕುಕ್ಕೆಯಲ್ಲಿ ಮಠದವರೇ ಪೂಜೆ ಮಾಡುತ್ತಾ ಬಂದಿದ್ದಾರೆ: ಪಲಿಮಾರು ಸ್ವಾಮೀಜಿ

Update: 2021-02-28 17:54 GMT

ಉಡುಪಿ, ಫೆ.28: ಮಧ್ವಾಚಾರ್ಯರ ಕಾಲದಿಂದಲೂ ಕುಕ್ಕೆಯಲ್ಲಿ ಮಠದವರೇ ಪೂಜೆ ಮಾಡುತ್ತಾ ಬಂದಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ದೇವಾಲಯದ ಹಾಗೆ ಅಲ್ಲ. ಕುಕ್ಕೆಯ ಆಚರಣೆ, ಸಂಪ್ರದಾಯಗಳು ಮಠದಂತೆ ಇದೆ. ಕುಕ್ಕೆಯಲ್ಲಿ ತಲೆಯ ಮೇಲೆ ಹೊತ್ತುಕೊಂಡು ಹೋಗುವ ಉತ್ಸವ ನಡೆಯುವುದಿಲ್ಲ. ಆಚಾರ್ಯ ಮಧ್ವರ ಕಾಲದಿಂದ ಮಧ್ವರಿಂದ ಪೂಜೆ ನಡೆಯುತ್ತಿದೆ ಎಂದು ಉಡುಪಿ ಪಲಿಮಾರು ಮಠಾಧೀಶ ಶ್ರೀವಿದ್ಯಾ ಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸ್ವಾಮೀಜಿ, ಕುಕ್ಕೆಯಲ್ಲಿ ಈ ಹಿಂದಿನಿಂದಲೂ ನಡೆದುಕೊಂಡ ರೀತಿಯ ಪೂಜಾ ಪದ್ಧತಿಯನ್ನು ಮುಂದುವರಿಸಬೇಕು. ಆಚರಣೆಯಲ್ಲಿ ಭಿನ್ನವಾದರೆ ದೇವಸ್ಥಾನ ಅದನ್ನು ಒಪ್ಪಿಕೊಳ್ಳುವುದಿಲ್ಲ. ಪ್ರತಿಷ್ಠಾ ಕಾಲದಲ್ಲಿ ಪೂಜೆ ಯಾವ ರೀತಿ ಆರಂಭವಾಗಿದೆ. ಅದು ಹಾಗೆಯೇ ಮುಂದುವರೆಯಬೇಕು. ಯಾವುದೇ ವ್ಯತ್ಯಾಸಗಳು ಆದರೆ ದೋಷ ಬರುತ್ತದೆ ಎಂದರು.

ನನಗೆ ರುದ್ರನ ಮೇಲೆ ದ್ವೇಷ ಇಲ್ಲ. ನಾನು ರುದ್ರ ಪಾರಾಯಣ ಮಾಡುತ್ತೇನೆ. ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾನು ರುದ್ರ ಪಾರಾಯಣ ಮಾಡಿಸುತ್ತಿದ್ದೇನೆ. ಯಾವುದೇ ದೇವಸ್ಥಾನದಲ್ಲಿ ಆಗಲಿ ಅನೂಚಾನವಾಗಿ ಬಂದ ಆಚರಣೆ ಅದು ಹಾಗೆಯೇ ಮುಂದುವರೆಯಬೇಕು. ಮಂತ್ರ ಕ್ರಮ ಎಲ್ಲವೂ ತಂತ್ರದ ರೀತಿಯಲ್ಲಿ ಬಂದರೆ ಚಂದ. ಕುಕ್ಕೆಯಲ್ಲಿ ಸ್ಕಂದನ ದೇವಸ್ಥಾನ ಇರುವುದು. ಸ್ಕಂದನ ಪೂಜೆ ಹೇಗೆ ಆಗಬೇಕೋ ಅದು ಹಾಗೆ ನಡೆದುಕೊಂಡು ಬರುತ್ತಿದೆ. ಸುಬ್ರಹ್ಮಣ್ಯ ಸ್ಕಂದ ಕೇಂದ್ರಿತವಾದಂತಹ ಕ್ಷೇತ್ರ. ಬದಲಾವಣೆಗಳು ಆಗಬೇಕಾದರೆ ವಿಮರ್ಶೆ ಮಾಡಬೇಕು ಎಂಬುದು ನನ್ನ ಅನಿಸಿಕೆ ಎಂದರು.

ನನ್ನ ಅಭಿಪ್ರಾಯ ಕೇಳಿದರೆ ಯಾವುದೇ ಪೂಜಾ ಬದಲಾವಣೆಗಳು ಬೇಡ. ಆದರೆ ಬದಲಾವಣೆ ಬೇಕು ಅನ್ನುವವರು ವಿಮರ್ಶೆ ಮಾಡಿ ಎಂದು ಪಲಿಮಾರುಶ್ರೀ ಸಲಹೆ ನೀಡಿದರು.

ಸಂರಕ್ಷಣಾ ಸಮಿತಿ ಖಂಡನೆ: ಸುಬ್ರಹ್ಮಣ್ಯ ದೇವಸ್ಥಾನ ಶೈವ ದೇವಸ್ಥಾನವಾಗಿರುವುದರಿಂದ ಮಾ.11ರಂದು ನಡೆಯುವ ಶಿವರಾತ್ರಿಯ ದಿನ ಅಲ್ಲಿ ರುದ್ರ ಪಾರಾಯಣ, ಭಸ್ಮಾರ್ಚನೆ, ಜಾಗರಣೆ ಮುಂತಾದ ಆಚರಣೆಗಳನ್ನು ಹಮ್ಮಿಕೊಳ್ಳಬೇಕೆಂದು ಸುಬ್ರಹ್ಮಣ್ಯ ದೇವಸ್ಥಾನ ಹಿತರಕ್ಷಣಾ ಸಮಿತಿ, ದೇವಸ್ಥಾನದ ಆಡಳಿತ ಮಂಡಳಿಗೆ ನೀಡಿರುವ ಮನವಿಯನ್ನು ಬೆಂಗಳೂರಿನ ಸನಾತನ ಸಂಪ್ರದಾಯ ಸಂಕ್ಷಣಾ ಸಮಿತಿ ವಿರೋಧಿಸಿದೆ.

ರಾಜ್ಯದಲ್ಲಿ ಇರುವ ಎಲ್ಲಾ ದೇವಸ್ಥಾನಗಳಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಪೂಜಾ ಪದ್ಧತಿಗಳು ನಿಶ್ಚಿತ ರೀತಿಯಲ್ಲಿ ಆಯಾ ಆಗಮಗಳ ಸಂಪ್ರದಾಯದಂತೆ ನಡೆದು ಕೊಂಡು ಬಂದಿವೆ. ಸುಬ್ರಹ್ಮಣ್ಯ ದೇವಸ್ಥಾನದಲ್ಲೂ ಅನಾದಿ ಕಾಲದಿಂದ ತಂತ್ರಸಾರ ಹಾಗೂ ವೈಖಾನನ ಆಗಮದ ಸಂಪ್ರದಾಯದಂತೆ ಪೂಜಾ ಪದ್ಧತಿಗಳು ನಡೆದುಕೊಂಡು ಬಂದಿವೆ. ಆದ್ದರಿಂದ ಇದೇ ಪೂಜಾ ಪದ್ಧತಿಗಳು ನಡೆದುಕೊಂಡು ಹೋಗಬೇಕು ಎಂದು ಸಮಿತಿಯ ಪ್ರೊ.ಎ.ಹರಿದಾಸ ಭಟ್ಟ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಪೂಜಾ ಪದ್ಧತಿಯಲ್ಲಿ ಯಾವುದೇ ರೀತಿಯ ಬದಲಾವಣೆಗೆ ಅವಕಾಶ ನೀಡಬಾರದು. ಎಲ್ಲಾ ದೇವಾಲಯಗಳಲ್ಲೂ ಆಯಾ ಆಗಮ ಸಂಪ್ರದಾಯದಂತೆ ಪೂಜಾ ಪದ್ದತಿ ನಡೆಯಬೇಕು ಎಂದು ಸಮಿತಿಯು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಒತ್ತಾಯಿಸುತ್ತದೆ ಎಂದು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಚಾರ್ಯರಾದ ಪ್ರೊ.ಭಟ್ಟ ಹೇಳಿದರು.

ಡಾ.ಎಸ್.ಆನಂದ ತೀರ್ಥ, ಪ್ರೊ.ಸಗ್ರಿ ರಾಘವೇಂದ್ರ ಉಪಾಧ್ಯಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News