ಉಳ್ಳಾಲ: ‘ಬ್ರಹ್ಮಶ್ರೀ’ ಪ್ರಶಸ್ತಿ ನಿರಾಕರಿಸಿದ ಸಂಸದ ನಳಿನ್

Update: 2021-02-28 18:14 GMT

ಉಳ್ಳಾಲ, ಫೆ.28: ರಾಜಕೀಯದಲ್ಲಿ ಪಾರದರ್ಶಕ, ಭ್ರಷ್ಟಾಚಾರರಹಿತ ಆಡಳಿತಕ್ಕೆ ಅರ್ಹರಾದ ವ್ಯಕ್ತಿ ಜನಾರ್ದನ ಪೂಜಾರಿ ಮಾತ್ರ. ರಾಜಕೀಯ ಕ್ಷೇತ್ರದಲ್ಲಿ ‘ಬ್ರಹ್ಮಶ್ರೀ’ ಪ್ರಶಸ್ತಿ ಪಡೆಯಲು ಅವರಿಗೆ ಮಾತ್ರ ಅರ್ಹತೆ ಇದೆ. ನಾನು ಪ್ರಶಸ್ತಿ, ಸನ್ಮಾನಗಳನ್ನು ಸ್ವೀಕರಿಸುವುದಿಲ್ಲ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆಯಿಂದ ಅಂಬಿಕಾ ರಸ್ತೆಯಲ್ಲಿ ನಡೆದ ‘ಮೆರುಗು-2021’ ನೃತ್ಯ ಸ್ಪರ್ಧೆ, ಆಯುಷ್ಮಾನ್ ಕಾರ್ಡ್ ಮತ್ತು ಶೈಕ್ಷಣಿಕ ಶಾಲಾ ಶುಲ್ಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಅವರು ಮಾತನಾಡುತ್ತಿದ್ದರು.

ಸನ್ಮಾನ, ಪ್ರಶಸ್ತಿ ಸ್ವೀಕರಿಸಲು ನಾನು ಅರ್ಹ ವ್ಯಕ್ತಿಯಲ್ಲ. ನಾನಿನ್ನೂ ಯುವಕ. ಪೂಜಾರಿಯವರಷ್ಟು ಎತ್ತರಕ್ಕೆ ಬೆಳೆಯಲು ಬಹಳಷ್ಟು ಕಾಲಾವಕಾಶ ಬೇಕು. ಬ್ರಹ್ಮಶ್ರೀ ಪ್ರಶಸ್ತಿ ಪಡೆಯಲು 65 ವರ್ಷವಾದರೂ ದಾಟಬೇಕು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ನೀಡುವುದಾದರೆ ನಾರಾಯಣ ಗುರುಗಳ ಆದರ್ಶಗಳನ್ನು ಅಳವಡಿಸಿ ಸರಳ, ಭ್ರಷ್ಟಾಚಾರರಹಿತ ಆಡಳಿತ ಮಾಡಿವರಿಗೆ ನೀಡಿದರೆ ಉತ್ತಮ. ನಾನು ಯಾವ ಜಾತಿಗೂ ಸೀಮಿತನಲ್ಲ. ಹಿಂದುತ್ವಕಾಗಿ ಮಾತ್ರ ಸೀಮಿತ ನನ್ನ ಸಂಸದ ಸ್ಥಾನ ಹೋದರೂ ಹಿಂದುತ್ವ ಬಿಡಲಾರೆ ಎಂದು ಸಾರಿದರು.

ಅವರು ಸರ್ವ ಧರ್ಮೀಯರನ್ನು ನಾರಾಯಣ ಗುರುಗಳ ತತ್ವದಡಿ ಕೊಂಡೊಯ್ಯುತ್ತಿದ್ದಾರೆ. ಅವರಿಗೆ ರಾಜಕಾರಣಿಯಾಗಿ ಅಭಿನಂದನೆ ಕೊಡುತ್ತಿಲ್ಲ. ಅವರು ಬ್ರಹ್ಮಶ್ರೀಗೆ ಅರ್ಹರು. ಆದರೆ ಅವರಿಗೆ ಪ್ರಶಸ್ತಿ ಸ್ವೀಕರಿಸಲು ಇಷ್ಟವಿಲ್ಲ. ಈ ಕಾರಣದಿಂದ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದು ಮಂಗಳೂರು ವಿವಿ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಗಣೇಶ್ ಅಮೀನ್ ಸಂಕಮಾರ್ ನಳಿನ್ ಪರ ಮಾತನಾಡಿದರು.
ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದ ನಳಿನ್‌ಗೆ ಅಭಿನಂದನೆ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News