ಕೋವಿಡ್ ಲಸಿಕೆ: ಸಹ ಅಸ್ವಸ್ಥತೆ ಪಟ್ಟಿಗೆ ಸೇರದ ’ಬೊಜ್ಜು’

Update: 2021-03-01 03:48 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮಾ.1: ಕೋವಿಡ್-19 ವಿರುದ್ಧದ ಲಸಿಕೆ ಪಡೆಯಲು 45-59 ವರ್ಷ ವಯೋಮಿತಿಯವರಿಗೆ ಕೇಂದ್ರ ಸರ್ಕಾರ ಹೆಸರಿಸಿದ 20 ಸಹ ಅಸ್ವಸ್ಥತೆಗಳ ಪೈಕಿ ಬೊಜ್ಜು ಸಮಸ್ಯೆಯನ್ನು ಸೇರಿಸದೇ ಇರುವ ಬಗ್ಗೆ ತಜ್ಞರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ಕೋವಿಡ್-19 ಸೋಂಕಿತರ ಪೈಕಿ ಬಹಳಷ್ಟು ಮಂದಿಯಲ್ಲಿ ಕೊಬ್ಬಿನ ಸಮಸ್ಯೆ ಕಂಡುಬಂದಿರುವುದರಿಂದ ಸಹ ಅಸ್ವಸ್ಥತೆಗಳ ಪಟ್ಟಿಯನ್ನು ಇದನ್ನು ಸೇರಿಸಬೇಕಿತ್ತು ಎನ್ನುವುದು ತಜ್ಞರ ಅಭಿಮತ.

ಮಧುಮೇಹ ಹಾಗೂ ಹೈಪರ್ ಟೆನ್ಷನ್ ಸಮಸ್ಯೆಗಳನ್ನು ಇತರ ಸಹ ಅಸ್ವಸ್ಥತೆ ಜತೆ ಜೋಡಿಸಲಾಗಿದೆ. ಲಸಿಕೆ ಪಡೆಯಲು ವಿಧಿಸಿದ ಮಾನದಂಡಗಳ ಪೈಕಿ, 10 ವರ್ಷದಿಂದ ಮಧುಮೇಹ ಸಮಸ್ಯೆ ಇರುವವರು ಅಥವಾ ಹೈಪರ್‌ಟೆನ್ಷನ್‌ಗೆ ಚಿಕಿತ್ಸೆ ಪಡೆಯುತ್ತಿರುವವರು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹಿರಿಯ ವೈದ್ಯ ಡಾ.ಗೌತಮ್ ಬನ್ಸಾಲಿ ಹೇಳುತ್ತಾರೆ.

ಎನ್‌ಎಸ್‌ಸಿಐ ವೊರ್ಲಿಯಲ್ಲಿ ಜಂಬೊ ಲಸಿಕಾ ಕೇಂದ್ರ ಆರಂಭಿಸಿರುವ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸಾ ತಜ್ಞ ಡಾ.ಮುಫಝಲ್ ಲೋಕ್ಡವಾಲಾ ಹೇಳುವಂತೆ, "ಪಟ್ಟಿಯಲ್ಲಿ ಬೊಜ್ಜು ಸೇರಿಸದಿರುವುದು ಎದ್ದುಕಾಣುವ ಪ್ರಮಾದ. ವಿಶ್ವಾದ್ಯಂತ ಇದನ್ನು ಅಪಾಯ ಸಾಧ್ಯತೆಯ ಅಂಶ ಎಂದು ಪರಿಗಣಿಸಲಾಗಿದೆ. ಮುಂಬೈನಲ್ಲೂ ಬೊಜ್ಜು ಸಮಸ್ಯೆ ಇರುವವರಿಗೆ ಅಪಾಯ ಸಾಧ್ಯತೆ ಶೇಕಡ 60ರಷ್ಟು ಅಧಿಕ ಹಾಗೂ ಸೋಂಕಿನಿಂದ ಇವರು ಸಾಯುವ ಸಾಧ್ಯತೆ ಶೇಕಡ 30ರಷ್ಟು ಹೆಚ್ಚು ಎಂದು ಅಂದಾಜಿಸಲಾಗಿದೆ. ಆದ್ದರಿಂದ 40 ವರ್ಷ ಮೇಲ್ಪಟ್ಟವರ ಬಿಎಂಐ ಪರಿಗಣಿಸಬೇಕಿತ್ತು"

ದೇಶದಲ್ಲಿ ಬೊಜ್ಜಿನ ಸಮಸ್ಯೆ ಇರುವ 135 ದಶಲಕ್ಷ ಮಂದಿ ಮಧುಮೇಹ ಹಾಗೂ ಹೃದ್ರೋಗದ ಅಪಾಯ ಎದುರಿಸುತ್ತಿದ್ದು, ಇದನ್ನು ಪಟ್ಟಿಯಲ್ಲಿ ಸೇರಿಸಬೇಕಿತ್ತು ಎಂದು ಮಧುಮೇಹ ತಜ್ಞ ಡಾ.ರಾಜೀವ್ ಕೋವಿಲ್ ಅಭಿಪ್ರಾಯಪಡುತ್ತಾರೆ.

ಬಿವೈಎಲ್ ನಾಯರ್ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಹೇಳುವಂತೆ, "ಐಸಿಯುಗೆ ದಾಖಲಾಗುವ ಶೇಕಡ 35ರಷ್ಟು ಮಂದಿಯಲ್ಲಿ ಅಧಿಕ ದೇಹತೂಕದ ಸಮಸ್ಯೆ ಇದೆ. ಅವರ ಶ್ವಾಸಕೋಶ ಕುಗ್ಗಿ ಅವರನ್ನು ವೆಂಟಿಲೇಟರ್ ಬೆಂಬಲದಲ್ಲಿ ಇಡಲಾಗಿದೆ. ಇದು ಹೆಚ್ಚುವರಿ ಸವಾಲು"

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News