ಮೆಹುಲ್ ಚೋಕ್ಸಿ ಪೌರತ್ವ ರದ್ದುಪಡಿಸಿದ ಆಂಟಿಗುವಾ

Update: 2021-03-01 03:54 GMT

ಆಂಟಿಗುವಾ, ಮಾ.1: ಬಹುಕೋಟಿ ವಂಚನೆ ಹಗರಣದ ಆರೋಪಿ ನೀರವ್ ಮೋದಿಯ ಗಡಿಪಾರಿಗೆ ಬ್ರಿಟನ್ ನ್ಯಾಯಾಲಯ ಆದೇಶಿಸಿದ ಬೆನ್ನಲ್ಲೇ, ಪ್ರಕರಣದ ಸಹ ಆರೋಪಿ ಮೆಹುಲ್ ಚೋಕ್ಸಿಗೆ ಹೂಡಿಕೆ ಯೋಜನೆ ಆಧಾರದಲ್ಲಿ ನೀಡಿದ್ದ ಪೌರತ್ವವನ್ನು ಕೆರೀಬಿಯನ್ ದೇಶವಾದ ಆಂಟಿಗುವಾ ಮತ್ತು ಬರ್ಬುಡಾ ರದ್ದುಪಡಿಸಿವೆ. 2017ರ ನವೆಂಬರ್‌ನಲ್ಲಿ ಚೋಕ್ಸಿಗೆ ಈ ಪೌರತ್ವ ಲಭಿಸಿತ್ತು.

ಪೌರತ್ವ ಮರುಸ್ಥಾಪನೆ ಸಂಬಂಧ ಆಂಟಿಗುವಾ ಸಿವಿಲ್ ನ್ಯಾಯಾಲಯದಲ್ಲಿ ಚೋಕ್ಸಿ ಕಾನೂನು ಹೋರಾಟ ನಡೆಸುತ್ತಿದ್ದಾರೆ ಎಂದು ಸಿಬಿಐ ಮತ್ತು ಕಾನೂನು ಜಾರಿ ನಿರ್ದೇಶನಾಲಯದ ಉನ್ನತ ಅಧಿಕಾರಿಗಳು ಹೇಳಿದ್ದಾರೆ.

"ಆಂಟಿಗುವಾ ಸರ್ಕಾರ ಚೋಕ್ಸಿಯ ಪೌರತ್ವವನ್ನು ರದ್ದುಪಡಿಸಿದ ಬಳಿಕ ಆರೋಪಿ ಸೆಂಟ್ ಜಾನ್ಸ್ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆಂಟಿಗುವಾ ಸರ್ಕಾರ ವಿರುದ್ಧದ ಕಾನೂನು ಹೋರಾಟದಲ್ಲಿ ಚೋಕ್ಸಿಗೆ ಸೋಲಾಗಲಿದೆ ಎನ್ನುವುದು ನಮ್ಮ ನಂಬಿಕೆ. ಭಾರತೀಯ ಬ್ಯಾಂಕ್‌ಗಳಿಗೆ ವಂಚಿಸಿದ ಬಳಿಕ ಸರ್ಕಾರದ ಹೂಡಿಕೆ ಯೋಜನೆಯ ದುರ್ಲಾಭ ಪಡೆದು ಈ ದ್ವೀಪ ದೇಶದಲ್ಲಿ ಆಶ್ರಯ ಪಡೆಯುವ ಹುನ್ನಾರ ನಡೆಸಿದ್ದ" ಎಂದು ವಿವರಿಸಿದ್ದಾರೆ.

ಪೌರತ್ವ ರದ್ದುಪಡಿಸಿದ್ದನ್ನು ಪ್ರಶ್ನಿಸಿದ ದಾವೆಯನ್ನು ಚೋಕ್ಸಿ ಸದ್ಯದಲ್ಲೇ ಸೋಲಲಿದ್ದಾರೆ. ಆರೋಪಿಯನ್ನು ಭಾರತಕ್ಕೆ ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳುವುದಾಗಿ ಆಂಟಿಗುವಾ ಪ್ರಧಾನಿ ಗ್ಯಾಸ್ಟೊನ್ ಬ್ರೌನ್ ಭರವಸೆ ನೀಡಿದ್ದು, ಗಡೀಪಾರು ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಆಂಟಿಗುವಾ ವೀಕ್ಷಕ ಬ್ರೌನ್ 2019ರ ಜೂನ್‌ನಲ್ಲಿ ನೀಡಿದ ವರದಿಯಲ್ಲಿ, "ಚೋಕ್ಸಿ ಒಬ್ಬ ವಂಚಕ. ಆತನಿಂದಾಗಿ ಸಿಐಪಿ ಯೋಜನೆಯ ಘನತೆಗೆ ಧಕ್ಕೆಯಾಗಿದೆ" ಎಂದು ಉಲ್ಲೇಖಿಸಿದ್ದರು.

2 ಲಕ್ಷ ಡಾಲರ್ ಹೂಡಿಕೆ ಮಾಡುವವರಿಗೆ 132 ದೇಶಗಳಲ್ಲಿ ವೀಸಾಮುಕ್ತ ಪ್ರವಾಸಕ್ಕೆ ಅವಕಾಶವಿರುವ ಆಂಟಿಗುವಾ ಪೌರತ್ವ ನೀಡಲಾಗುತ್ತದೆ. ಈ ದೇಶದ ಜತೆ ಗಡೀಪಾರು ಒಪ್ಪಂದ ಇಲ್ಲದ ಹಿನ್ನೆಲೆಯಲ್ಲಿ ಭಾರತ ಸರ್ಕಾರ 2018ರಲ್ಲಿ ಚೋಕ್ಸಿ ಗಡೀಪಾರಿಗೆ ಮನವಿ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News