ಕಾಂಗ್ರೆಸ್ ಮೊಘಲರ ಪ್ರತಿನಿಧಿಯ ಸೂತ್ರದ ಗೊಂಬೆ: ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆ

Update: 2021-03-01 04:19 GMT
ಚಿತ್ರ: ಟ್ವಿಟರ್ @Tejasvi_surya

ಗುವಾಹತಿ, ಮಾ.1: ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಮೊಘಲರ ಪ್ರತಿನಿಧಿ; ಕಾಂಗ್ರೆಸ್ ಪಕ್ಷ ಅವರ ಸೂತ್ರದ ಗೊಂಬೆ ಎಂದು ಹೇಳುವ ಮೂಲಕ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿವಾದದ ಕಿಡಿ ಹೊತ್ತಿಸಿದ್ದಾರೆ.

ದಿಬ್ರೂಗಢದಲ್ಲಿ ನಡೆದ ಬಿಜೆಪಿ ಯುವ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಎಐಯುಡಿಎಫ್ ವಿರೋಧಿ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. "ಕಾಂಗ್ರೆಸ್ ಪಕ್ಷ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರ ಕೈಗೊಂಬೆ. ನಾವು ಅವರನ್ನು ಕಿತ್ತೆಸೆಯಬೇಕು. ಹೊಸ ಅಸ್ಸಾಂ ಸೃಷ್ಟಿಸಲು ಅವರನ್ನು ಹೊರಗೋಡಿಸಬೇಕು" ಎಂದು ಹೇಳಿದರು.

ಚುನಾವಣಾ ಆಯೋಗ ಶುಕ್ರವಾರ ಚುನಾವಣೆ ಘೋಷಣೆ ಮಾಡಿದ ಬಳಿಕ ಇದು ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ಮೊದಲ ರ್ಯಾಲಿ. ಮಾರ್ಚ್ 27ರಿಂದ ವಿವಿಧ ಹಂತದಲ್ಲಿ ಅಸ್ಸಾಂ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ರಾಜ್ಯಾದ್ಯಂತ ಯುವಜನತೆ ಮತ್ತು ಮಹಿಳೆಯರನ್ನು ಆಕರ್ಷಿಸುವ ಸಲುವಾಗಿ ಬಿಜೆಪಿ ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸುತ್ತಿದೆ.

ಕಳೆದ ವಾರವಷ್ಟೇ ತಮಿಳುನಾಡಿನ ಡಿಎಂಕೆಯನ್ನು ಹಿಂದೂ ವಿರೋಧಿ ಪಕ್ಷ ಎಂದು ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದರು. "ಬಿಜೆಪಿ ಆಡಳಿತದ ಬಳಿಕ ಭದ್ರ ಅಡಿಪಾಯ ಹಾಕಿರುವ ಅಸ್ಸಾಂ ಅಭಿವೃದ್ಧಿ ತಡೆಯಲು ಯಾರಿಗೂ ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಆತ್ಮನಿರ್ಭರ ಭಾರತದ ದೃಷ್ಟಿಕೋನ ಅನಾವರಣಗೊಂಡಿದ್ದು, ಇದು ಭಾರತದಲ್ಲಿ ಹೊಸ ಕ್ರಾಂತಿ" ಎಂದು ಬಣ್ಣಿಸಿದರು.

ಮುಖ್ಯಮಂತ್ರಿ ಸರ್ವಾನಂದ ಸೋನೋವಾಲ, ಸಂಪುಟ ದರ್ಜೆ ಸಚಿವರಾದ ಹಿಮಾಂತ ಬಿಸ್ವ ಶರ್ಮಾ, ಅಸ್ಸಾಂ ಬಿಜೆಪಿ ಅಧ್ಯಕ್ಷ ರಂಜೀತ್ ದಾಸ್ ಮತ್ತು ಕೇಂದ್ರ ಸಚಿವ ರಾಮೇಶ್ವರ್ ತೆಲಿ ಸೇರಿದಂತೆ ಹಿರಿಯ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News