ಭಟ್ಕಳ ಅಂಜುಮನ್ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ಜುಕಾಕೋ ಅಬ್ದುಲ್ ರಹೀಂ ನಿಧನ

Update: 2021-03-01 06:42 GMT

ಭಟ್ಕಳ, ಮಾ.1: ಇಲ್ಲಿನ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮುಂದಾಳು ಜುಕಾಕೋ ಅಬ್ದುಲ್ ರಹೀಂ(82) ಅವರು ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಭಾರತೀಯ ಕಾಲಮಾನ ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ. ಇವರು ಮಾಜಿ ಸಚಿವ ದಿ.ಜುಕಾಕೊ ಶಂಸುದ್ದೀನ್ ಅವರ ಪುತ್ರ.

ಜುಕಾಕೋ ಅಬ್ದುರ್ರಹೀಂ ಅವರು ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಇವರು ತಮ್ಮ ಕುಟುಂಬ ಸಮೇತ ಅಮೆರಿಕದಲ್ಲೇ ನೆಲೆಸಿದ್ದರೂ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 1987ರಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಗೊಂಡಿದ್ದ ಜುಕಾಕೋ ಅಬ್ದುಲ್ ರಹೀಂ, 2003-07ರ ಅವಧಿಯಲ್ಲಿ ಉಪಾಧ್ಯಕ್ಷರಾಗಿ, 2007-15ರವರೆಗೆ ಪ್ರಧಾನ ಕಾರ್ಯದರ್ಶಿಯಾಗಿ, 2015-2020ರವರೆಗೆ ಅಂಜುಮನ್ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ದುಬೈ ಜಮಾಅತ್ ಪ್ರಧಾನ ಕಾರ್ಯದರ್ಶಿಯಾಗಿ, ಭಟ್ಕಳ ಜಮಾಅತುಲ್ ಮುಸ್ಲಿಮೀನ್ ಹಾಗೂ ಮಜ್ಲಿಸೆ ಇಸ್ಲಾ-ವ-ತಂಝೀಮ್ ಸಂಸ್ಥೆಯಲ್ಲೂ ಇವರು ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.  

 ಮೃತರ ಅಂತ್ಯಸಂಸ್ಕಾರವು ಮಾ.2ರಂದು ಸಂಜೆ ಲಾಸ್ ಏಂಜಲೀಸ್ ನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ: ಜುಕಾಕೋ ಅಬ್ದುಲ್ ರಹೀಂ ಅವರ ನಿಧನಕ್ಕೆ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಝಮ್ಮಿಲ್ ಕಾಝಿಯ ತೀವ್ರ ಸಂತಾಪ ಸೂಚಿಸಿದ್ದಾರೆ. ಭಟ್ಕಳದ ಅಂಜುಮನಾಬಾದ್ ನಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ಮಾ.2ರಂದು ಸಂಜೆ ಸಂತಾಪ ಸಭೆ ಆಯೋಜಿಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಾಸಕ ಸುನೀಲ್ ನಾಯ್ಕ, ತಂಝೀಮ್ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸೈಯದ್ ಫರ್ವೇಝ್, ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುರೇಶ್ ನಾಯ್ಕ,  ತರ್ಬೀಯತ್ ಎಜ್ಯುಕೇಶನ್ ಸೂಸೈಟಿಯ ಅಧ್ಯಕ್ಷ ಇಸ್ಮಾಯೀಲ್ ಮೊಹ್ತೆಶಾಮ್, ಇಸ್ಲಾಮಿಕ್ ವೆಲ್ಫೇರ್ ಸೂಸೈಟಿಯ ಅಧ್ಯಕ್ಷ ಖಾದಿರ್ ಮಿರಾ ಪಟೇಲ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News