ಆರ್ಥಿಕ ಪತನ ನಿಜ, ಆದರೆ ನನ್ನ ಸಾಮ್ರಾಜ್ಯ ಮುಳುಗಿಲ್ಲ: ಉದ್ಯಮಿ ಬಿ.ಆರ್.ಶೆಟ್ಟಿ

Update: 2021-03-01 16:27 GMT

ಉಡುಪಿ, ಮಾ.1: ‘ನಾನು ಕೆಲವರನ್ನು ನಂಬಿ ಮೋಸ ಹೋದೆ. ನನ್ನ ಕಂಪೆನಿಯಲ್ಲಿ ಇದ್ದವರೇ ನನ್ನ ಬೆನ್ನಿಗೆ ಚೂರಿ ಹಾಕಿದರು. ನನ್ನ ಕಂಪೆನಿಯಲ್ಲಿ ಅಕೌಂಟೆಂಟ್ ಆಗಿ ಸೇರಿದವನೊಬ್ಬನನ್ನು ಸಿಎಫ್‌ಓ ಮಾಡಿದೆ. ಆತ ನನ್ನ ಬೆನ್ನಿಗೆ ಚೂರಿ ಹಾಕಿದ. ನನಗೆ ತಿಳಿಯದಂತೆ ದೊಡ್ಡ ಮಟ್ಟದಲ್ಲಿ ಆರ್ಥಿಕ ವಂಚನೆ ಮಾಡಿದ.’ ಹೀಗೆಂದು ಹೇಳಿದವರು ಅನಿವಾಸಿ ಭಾರತೀಯ ಉದ್ಯಮಿ ಉಡುಪಿಯ ಬಿ.ಆರ್.ಶೆಟ್ಟಿ.

ಉಡುಪಿಯಿಂದ ತೆರಳಿ ಕೊಲ್ಲಿ ರಾಷ್ಟ್ರಗಳಲ್ಲಿ ಬೃಹತ್ ಸಾಮ್ರಾಜ್ಯವನ್ನು ಕಟ್ಟಿ ಇತ್ತೀಚೆಗೆ ಬೆಳಕಿಗೆ ಬಂದ ಕಂಪೆನಿಗಳ ಹಗರಣಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಈಗ ಹುಟ್ಟೂರಿ ನಲ್ಲಿದ್ದರೂ ಸುದೀರ್ಘ ಕಾಲದಿಂದ ಮಾಧ್ಯಮಗಳ ರಾಡಾರ್‌ನಿಂದ ದೂರವೇ ಉಳಿದಿದ್ದ ಬಿ.ಆರ್.ಶೆಟ್ಟಿ ಇಂದು ಉಡುಪಿಯಲ್ಲಿ ತಾವೇ ಕಟ್ಟಿಸಿರುವ ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿ ಮಾದ್ಯಮಗಳ ಎದುರು ಕಾಣಿಸಿಕೊಂಡರು.

ಈ ವೇಳೆ ತಾವೇ ಮಾಧ್ಯಮದವರೊಂದಿಗೆ ಸಂವಾದಕ್ಕೆ ಮುಂದಾದ ಅವರು, ತಮ್ಮ ಆರ್ಥಿಕ ಅದ:ಪತನ, ಸದ್ಯದ ಸ್ಥಿತಿಗತಿ ಬಗ್ಗೆ ವಿವರವಾಗಿ ಮಾತನಾಡಿದರು. ನಾನು ಎಲ್ಲೂ ಓಡಿ ಹೋಗಿಲ್ಲ, ಹೋಗುವುದಿಲ್ಲ. ನನ್ನ ಸಾಮ್ರಾಜ್ಯ ಪತನವಾಗಿದ್ದು ನಿಜ. ಆದರೆ ಅದಕ್ಕೆ ನಾನು ಕಾರಣ ಅಲ್ಲ, ನಾನೊಬ್ಬ ಬಲಿಪಶು ಎಂದು ಸಮಜಾಯಿಷಿ ನೀಡಿದರು.

ಆದರೆ ಆತನನ್ನು ಆರೋಪಿ ಎನ್ನಲಾರೆ. ಏಕೆಂದರೆ ಆರೋಪವಿನ್ನೂ ಸಾಬೀತಾಗಿಲ್ಲ. ಈ ಪ್ರಕರಣವೀಗ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಈ ಹಂತದಲ್ಲಿ ಹೆಚ್ಚೇನೂ ನಾನು ಹೇಳಲಾರೆ. ಒಟ್ಟಾರೆಯಾಗಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸೇರಿಕೊಂಡು ನನಗೆ ವಂಚನೆ ಮಾಡಿವೆ. ಮೋಸ ಮಾಡಿವೆ. ಆದರೆ ಜನರ ಆಶೀರ್ವಾದದಿಂದ ನಾನು ಎಲ್ಲಾ ಸಮಸ್ಯೆಗಳಿಂದ ಹೊರಬರುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದರು.

ವಿದೇಶಗಳಲ್ಲಿ ಆರ್ಥಿಕ ಪತನವಾಗಿ ಹಿನ್ನಡೆಯಾಗಿರುವುದು ನಿಜ. ಆದರೆ ದೇವರ ದಯೆಯಿಂದ ನನ್ನ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಹದಗೆಟ್ಟಿಲ್ಲ. ನೀವು ಯಾರೂ ಊಹಿಸಿರದಷ್ಟು ಬಿ.ಆರ್.ಶೆಟ್ಟಿ ಆರ್ಥಿಕವಾಗಿ ಬಲಿಷ್ಠವಾಗಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಬಿ.ಆರ್.ಶೆಟ್ಟಿ ಸಾಮ್ರಾಜ್ಯ ಮುಳುಗಿಹೋಯಿತು ಎಂಬ ಸುದ್ದಿಗಳನ್ನು ನೋಡಿ, ಓದಿ ಬೇಸತ್ತು ಹೋಗಿದ್ದೇನೆ ಎಂದವರು ನಿಟ್ಟುಸಿರು ಬಿಡುತ್ತಾ ಹೇಳಿದರು.

ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಹತ್ತು ಸಾವಿರನೇ ಮಗುವಿನ ಜನನದ ಸಂದರ್ಭದಲ್ಲಿ ಸೋಮವಾರ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ಸಂಭ್ರಮಾಚರಣೆ ಸಮಾರಂಭದಲ್ಲಿ ಬಿ.ಆರ್. ಶೆಟ್ಟಿ ಭಾಗವಹಿಸಿದರು.

ಜನರ ಸೇವೆಯೇ ಜನಾರ್ದನ ಸೇವೆ ಎಂದು ನಂಬಿದವನು ನಾನು. 1970ರ ದಶಕದಲ್ಲಿ ಉಡುಪಿ ನಗರಸಭೆಗೆ ಅತ್ಯಧಿಕ ಮತಗಳ ಅಂತರದಿಂದ ಚುನಾಯಿತನಾದವನು ನಾನು. ಡಾ.ವಿ.ಎಸ್.ಆಚಾರ್ಯರು ಅಧ್ಯಕ್ಷರಾಗಿ, ನಾನು ಉಪಾಧ್ಯಕ್ಷನಾಗಿ ನಗರದಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದ್ದೇವೆ. ಆಗ ನಾವು ಮಾಡಿದ ಒಳ್ಳೆಯ ಕೆಲಸ ನನ್ನನ್ನು ಕಾಪಾಡುತ್ತದೆ ಎಂದು ನಂಬಿದ್ದೇನೆ. ಯಾರಿಗೂ ನಾನು ವಂಚನೆ ಮಾಡಿಲ್ಲ ಎಂದು ಆತ್ಮವಿಶ್ವಾಸದಿಂದ ಹೇಳುತ್ತೇನೆ ಎಂದು ಬಿ.ಆರ್.ಶೆಟ್ಟಿ ನುಡಿದರು.

ನಾನು ಉಡುಪಿಯಲ್ಲಿದ್ದಾಗ ನನ್ನ ಕಿಸೆಯಲ್ಲಿ ದುಡ್ಡೇ ಇರುತ್ತಿರಲಿಲ್ಲ. ಸಾಲ ಮಾಡಿ ಬೈಕಿಗೆ ಪೆಟ್ರೋಲ್ ಹಾಕಿ ಓಡಾಡುತಿದ್ದೆ. ಆಗ ಯಾರಿಂದೆಲ್ಲಾ ಸಾಲ ಪಡೆದಿದ್ದೇನೊ ಎಲ್ಲರಿಗೂ ವಾಪಾಸು ಮಾಡಿದ್ದೇನೆ. ಹೀಗಾಗಿ ನಾನು ಮರಳಿ ಬರುತ್ತೇನೆ. (ಐ ವಿಲ್ ಕಮ್‌ಬ್ಯಾಕ್ ಆಗೈನ್). ಹಿಂದೆ ಡೊನಾಲ್ಡ್ ಟ್ರಂಪ್‌ಗೆ ಒಂದು ಕ್ರೆಡಿಟ್ ಕಾರ್ಡ್ ನೀಡಲು ಸಹ ಅಮೆರಿಕದ ಬ್ಯಾಂಕುಗಳು ಹಿಂದೇಟು ಹಾಕಿದ್ದವು. ದಿವಾಳಿ ಅಂಚಿನಲ್ಲಿದ್ದ ಆತ ಅಮೆರಿಕದ ಅಧ್ಯಕ್ಷನಾಗಿಲ್ಲವೇ?. ಅದೇ ರೀತಿ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಮತ್ತೆ ಮೇಲೆ ಬರುವ ವಿಶ್ವಾಸವಿದೆ ಎಂದರು.

ನಾನು ಕಷ್ಟ ಪಟ್ಟು ಗಳಿಸಿದ ಸಂಪತ್ತನ್ನು ಮತ್ತೆ ಗಳಿಸುತ್ತೇನೆ. ನನ್ನ ಟ್ರಸ್ಟ್ ಮೂಲಕ ನಡೆಯುತ್ತಿರುವ ಎಲ್ಲಾ ಉಚಿತ ಸಮಾಜ ಸೇವೆಯನ್ನು ಮುಂದುವರಿಸುತ್ತೇನೆ. ಈಗಾಗಲೇ ನನ್ನ ಆಸ್ತಿಯ ಅರ್ಧಭಾಗವನ್ನು ಮಿಲಿಂದಾ ಗೇಟ್ ಫೌಂಡೇಷನ್‌ಗೆ ದಾನ ಮಾಡಿದ್ದೇನೆ. ಏನು ಮಾಡಲಿ ನನ್ನ ಗ್ರಹಚಾರ ಚೆನ್ನಾಗಿಲ್ಲ ಎಂದು ಅವರು ನುಡಿದರು.

ಯಾರಾದರೂ ಮೇಲೆ ಹೋಗುತ್ತಾರೆ ಎಂದರೆ ಮತ್ಸರ ಪಡುವವರು ಸಾಕಷ್ಟು ಮಂದಿ ಇರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ನನಗೆ ಆತ್ಮೀಯರು. 1973ರಲ್ಲಿ ನಗರಸಭಾ ಚುನಾವಣಾ ಪ್ರಚಾರಕ್ಕೆ ಅವರು ಬಂದಿದ್ದರು. ಆದರೆ ಅವರಿಂದ ನಾನು ನೆರವು ಯಾಚಿಸಿಲ್ಲ. ಅವರನ್ನು ಭೇಟಿಯಾಗಿ ಚರ್ಚೆ ಮಾಡಲು ನನಗೆ ನಾಚಿಕೆಯಾಗುತ್ತದೆ. ಈ ಹಿಂದೆ ನಾನು ಅವರ ಜೊತೆ ಮಾತನಾಡಿದ್ದೇನೆ. ಆದರೆ ಇವತ್ತಿನ ನನ್ನ ಪರಿಸ್ಥಿತಿಯಲ್ಲಿ ಅವರ ಮುಂದೆ ನಿಲ್ಲಲು ನನಗೆ ಮುಜುಗರ ಆಗುತ್ತದೆ. ಹೀಗಾಗಿ ಬಿಜೆಪಿಯ ಯಾವುದೇ ಮುಖಂಡರನ್ನು ನಾನು ಭೇಟಿಯಾಗಿಲ್ಲ ಎಂದರು.

ಮಾಧ್ಯಮದವರು ವಿಜಯ್ ಮಲ್ಯ ಮೋಸ ಮಾಡಿ ಓಡಿ ಹೋದ, ನೀರವ್ ಮಲ್ಯ ಬ್ಯಾಂಕುಗಳಿಗೆ ಮೋಸ ಮಾಡಿ ಓಡಿ ಹೋದ ಎಂದು ಬರೆಯುತ್ತಿದ್ದಾರೆ. ನಾಳೆ ಬಿ.ಆರ್. ಶೆಟ್ಟಿ ದಿವಾಳಿಯಾಗಿ ಓಡಿಹೋದರು ಎಂದು ಬರೆಯಬಹುದು. ನಾನೆಲ್ಲಿಗೂ ಓಡಿ ಹೋಗಲ್ಲ. ಎಲ್ಲಾ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುತ್ತೇನೆ ಎಂದು ಹೇಳಿದರು.

ಅಬುದಾಬಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ದೇವಸ್ಥಾನಕ್ಕೆ ನಾನು ಅಧ್ಯಕ್ಷನಾಗಿದ್ದೇನೆ. ಅಲ್ಲಿನ ದೊರೆಯೇ ನನಗೀ ಜವಾಬ್ದಾರಿಯನ್ನು ವಹಿಸಿದ್ದಾರೆ. ಅತ್ಯಂತ ದೊಡ್ಡ ದೇವಸ್ಥಾನದ ನಿರ್ಮಾಣವಾಗುತ್ತಿದೆ ಎಂದರು.

ಬಿ.ಆರ್.ಶೆಟ್ಟಿ ಗ್ರೂಪ್ ಉಡುಪಿಯ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಡೆಸುತ್ತಿದೆ. ಇದೀಗ ಅಲ್ಲೇ ಪಕ್ಕದಲ್ಲಿ ತಂದೆಯವರ ಸ್ಮರಣೆಯಲ್ಲಿ ನಿರ್ಮಿಸುತ್ತಿರುವ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ತಾಂತ್ರಿಕ ಕಾರಣಕ್ಕಾಗಿ ನಿಂತಿದೆ. ಕಾಮಗಾರಿಗೆ ಅನುಮತಿ ದೊರೆತೊಡನೆಯೇ ಶೀಘ್ರದಲ್ಲಿ ಅದನ್ನು ನಿರ್ಮಿಸಿ ಉಡುಪಿಗೆ ಸುಸಜ್ಜಿತ, ಅತ್ಯಾಧುನಿಕ ಆಸ್ಪತ್ರೆಯನ್ನು ನೀಡುತ್ತೇನೆ. ನನ್ನ ಕನಸಿನ ಕೂಸಾದ ಈ ಆಸ್ಪತ್ರೆಯಿಂದ ಬರುವ ಲಾಭದಿಂದ ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ಆಸ್ಪತ್ರೆಯನ್ನು ಇನ್ನಷ್ಟು ಚೆನ್ನಾಗಿ ನಡೆಸಿಕೊಂಡು ಹೋಗುತ್ತೇನೆ ಎಂದವರು ಹೇಳಿದರು.

ಅಲ್ಲದೇ ಈ ಆಸ್ಪತ್ರೆಯಲ್ಲಿ ಪಕ್ಕದಲ್ಲೇ ಇರುವ ಪೇಜಾವರಶ್ರೀಗಳು ಕಲಿತ ಮಹಾತ್ಮಗಾಂಧಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಮೈನ್ ಶಾಲೆ)ಯನ್ನು ನಮಗೆ ನೀಡಿದರೆ, ಕುಸಿಯುವ ಹಂತದಲ್ಲಿರುವ ಈ ಶಾಲೆಯನ್ನು ಸುಸಜ್ಜಿತವಾಗಿ ಪುನರ್‌ನಿರ್ಮಿಸಿ ಉಚಿತ ಶಿಕ್ಷಣಕ್ಕೆ ವ್ಯವಸ್ಥೆ ಮಾಡುತ್ತೇವೆ ಎಂದರು.

ಭಾರತದಲ್ಲಿ ನಯಾಪೈಸೆ ಸಾಲ ಇಲ್ಲ

ವಿದೇಶಗಳಲ್ಲಿ ಉದ್ಯಮದಿಂದ ಭಾರೀ ನಷ್ಟ ಅನುಭವಿಸಿದರೂ ಭಾರತದಲ್ಲಿ ನನಗೆ ನಯಾಪೈಸೆ ಸಾಲವಿಲ್ಲ ಎಂದು ಹೇಳಿದ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿ, 2018ರಲ್ಲಿ ನನ್ನ ಕಂಪೆನಿಗಳ ಸಂಪತ್ತಿನ ಮೌಲ್ಯ 12.8 ಬಿಲಿಯನ್ ಡಾಲರ್. ನಂಬಿದ ವ್ಯಕ್ತಿಗಳು ಮೋಸ ಮಾಡಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗಿದೆ. 2017ರಲ್ಲಿ ನಾನು ಎನ್‌ಎಂಸಿಯಿಂದ ಹೊರಬಂದೆ, 2019ರಲ್ಲಿ ವಿದೇಶದ ನನ್ನೆಲ್ಲಾ ಸಾಮ್ರಾಜ್ಯ ಕುಸಿಯಿತು. ಲಕ್ಷ್ಮೀ ಚಂಚಲಚಿತ್ತೆ ಏನೂ ಮಾಡಲು ಸಾಧ್ಯವಿಲ್ಲ. ಸರಸ್ವತಿ ಮಾತ್ರ ಶಾಶ್ವತವಾಗಿ ಇರುತ್ತಾಳೆ ಎಂದರು.

ವಿಶ್ವದ ಆರು ಖಂಡಗಳಲ್ಲಿ 246 ಆಸ್ಪತ್ರೆಗಳನ್ನು ನಾನು ನಡೆಸುತಿದ್ದೆ. ಆದರೆ ಇಂದು ಯಾವುದು ಉಳಿದಿಲ್ಲ. ಈಗ ಭಾರತದಲ್ಲಿ ಮಾತ್ರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ಇದೀಗ ಉಡುಪಿ ಆಸ್ಪತ್ರೆ ಮಾದರಿಯಲ್ಲಿ ತಮ್ಮ ರಾಜ್ಯದಲ್ಲೂ ಆಸ್ಪತ್ರೆ ನಿರ್ಮಿಸುವಂತೆ ನಾಲ್ಕು ರಾಜ್ಯಗಳು ಕೇಳಿಕೊಂಡಿವೆ. ಉತ್ತರಪ್ರದೇಶದ ವಾರಣಸಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಐದು ಎಕರೆ ಜಾಗ ನೀಡಿದ್ದು ಫೆಬ್ರವರಿಯಲ್ಲಿ ಶಿಲಾನ್ಯಾಸ ನಡೆದಿದೆ. ಅಯೋಧ್ಯೆಯಲ್ಲೂ ಆಸ್ಪತ್ರೆ ನಿರ್ಮಿಸಲು ಕೇಳಿದ್ದಾರೆ. ಒರಿಸ್ಸಾದ ಭುವನೇಶ್ವರ, ಪುರಿಯಲ್ಲಿ, ಬಿಹಾರ ಹಾಗೂ ಉತ್ತರಖಂಡಗಳಲ್ಲೂ ನನಗೆ ಆಸ್ಪತ್ರೆ ನಿರ್ಮಿಸುವಂತೆ ಕೇಳಿದ್ದಾರೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News