ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 347 ಕೋ.ರೂ. ಅನುದಾನದ ಭರವಸೆ: ಸಚ್ಚಿದಾನಂದ ಮೂರ್ತಿ

Update: 2021-03-01 11:01 GMT

ಉಡುಪಿ, ಮಾ.1: ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 347 ಕೋಟಿ ರೂ. ಅನುದಾನ ನೀಡುವ ಬಗ್ಗೆ ಸರಕಾರ ಭರವಸೆ ನೀಡಿದೆ. ಇದರಲ್ಲಿ ಸಾಮೂಹಿಕ ವಿವಾಹ, ಜಿಲ್ಲೆಗೊಂದು ಬ್ರಾಹ್ಮಣ ಸಮುದಾಯ ಭವನ, ಅಪಾರ ಕರ್ಮ ಕಟ್ಟಡ, ವಸತಿ ಯೋಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ರವಿವಾರ ದೊಡ್ಡಣಗುಡ್ಡೆಯಲ್ಲಿ ನಡೆದ ಬ್ರಾಹ್ಮೀ ಸಭಾಭವನ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಹಿಂದುತ್ವ ಉಳಿಯಬೇಕಾದರೆ ಬ್ರಾಹ್ಮಣತ್ವ ಉಳಿಯಬೇಕಾಗಿದೆ. ಬ್ರಾಹ್ಮಣರಲ್ಲಿ 44 ಉಪ ಜಾತಿಗಳಿದ್ದು, ಎಲ್ಲರೂ ಹಿರಿಮೆ, ಕೀಳರಿಮೆ ಬಿಟ್ಟು ಸಂಘಟಿತರಾಗಬೇಕು ಎಂದ ಅವರು, ಬ್ರಾಹ್ಮಣರನ್ನು ಹೀಯಾಳಿಸುವ ಮನೋಭಾವ ಹೆಚ್ಚುತ್ತಿದೆ. ಸಾಹಿತ್ಯ, ಸಿನೆಮಾ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣರ ಅವಹೇಳನ ಮಾಡಲಾಗುತ್ತಿದೆ. ನಮ್ಮನ್ನು ಹಗುರವಾಗಿ ಮಾತನಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಭಾವಿ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾ ಸಾಗರತೀರ್ಥ ಸ್ವಾಮೀಜಿ, ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಅಧ್ಯಕ್ಷತೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ವಹಿಸಿದ್ದರು.

ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಮಹಾಬಲೇಶ್ವರ, ಉದ್ಯಮಿ ವಿದ್ಯಾಪ್ರಸಾದ್, ಬೆಂಗಳೂರಿನ ಕೆ.ಆರ್.ದಿನೇಶ್, ಹರಿಕೃಷ್ಣ, ಹುಬ್ಬಳ್ಳಿ ಹೊಟೇಲ್ ಉದ್ಯಮಿ ಶ್ರೀಕಾಂತ್ ಭಟ್ ಕೆಮ್ತೂರು, ಮೂಡುಬಿದಿರೆ ಉದ್ಯಮಿ ಶ್ರೀಪತಿ ಭಟ್, ಬೆಂಗಳೂರು ನಿಸರ್ಗ ಆಯುರ್ವೇದಿಕ್ ಮೆಡಿಸಿನ್‌ನ ಡಾ.ವಿ.ಅಶೋಕ್ ಕುಮಾರ್, ಪೆರಂಪಳ್ಳಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ಎನ್. ಪ್ರಸನ್ನ ಕುಮಾರ್ ರಾವ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ವಿಷ್ಣು, ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಕಾರ್ಯದರ್ಶಿ ಚಂದ್ರಕಾಂತ ಕೆ.ಎನ್. ಉಪಸ್ಥಿತರಿದ್ದರು.

ಪರಿಷತ್ ಅಧ್ಯಕ್ಷ ವಿಷ್ಣುಪ್ರಸಾದ್ ಪಾಡಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಾಧ್ಯಕ್ಷ ರಂಜನ್ ಕಲ್ಕೂರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರವೀಣ್ ಉಪಾಧ್ಯ ವಂದಿಸಿದರು. ವಿದ್ವಾನ್ ಗೋಪಾಲಾಚಾರ್ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News