ಬಾರ್ಕೂರು ಶಂಕರ ಶಾಂತಿಗೆ ಹಲ್ಲೆ ಪ್ರಕರಣ ಖಂಡಿಸಿ ಧರಣಿ

Update: 2021-03-01 13:06 GMT

ಉಡುಪಿ, ಮಾ.1: ಸಮಾಜ ಸೇವಕ, ಆರ್‌ಟಿಐ ಕಾರ್ಯಕರ್ತ ಬಾರ್ಕೂರು ಶಂಕರ ಶಾಂತಿಯವರಿಗೆ ಬಾರಕೂರು ದೇವಾಲಯದ ಸಭಾಭವನದ ಅಡುಗೆ ಕೋಣೆಯಲ್ಲಿ ಕೂಡಿಹಾಕಿ ಚಿತ್ರ ಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಇಂದು ಬನ್ನಂಜೆ ಬಿಲ್ಲವ ಸಭಾಭವನದ ಆವರಣದಲ್ಲಿ ಧರಣಿ ನಡೆಸಲಾಯಿತು.

ಸ್ಥಳಕ್ಕೆ ಆಗಮಿಸಿದ ಉಡುಪಿ ಡಿವೈಎಸ್ಪಿ ಶಿವಾನಂದ ನಾಯ್ಕಿ ಅವರಿಗೆ ಮನವಿ ಸಲ್ಲಿಸಿದ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಎಂ.ಪೂಜಾರಿ ಮಾತನಾಡಿ, ಪ್ರಕರಣ ನಡೆದು 10 ದಿನಗಳಾದರೂ ಆರೋಪಿಗಳನ್ನು ಈವರೆಗೆ ಬಂಧಿಸಿಲ್ಲ. ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸುವ ಬದಲು ಆತ ನೀಡಿದ ದೂರಿನಂತೆ ಹಲ್ಲೆಗೊಳಗಾದ ವ್ಯಕ್ತಿಯ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಗಳು ಈಗಲೂ ರಾಜರೋಷವಾಗಿ ತಿರುಗಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ಪೊಲೀಸ್ ಇಲಾಖೆ ಮತ್ತು ಜನಪ್ರತಿನಿಧಿಗಳು ಯಾವುದೇ ಒತ್ತಡಕ್ಕೆ ಮಣಿ ಯದೆ ಶಂಕರ ಶಾಂತಿಗೆ ನ್ಯಾಯ ಒದಗಿಸಬೇಕು. ಮುಂದಿನ ಎರಡು ದಿನ ಗಳೊಳಗೆ ಎಲ್ಲ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳದಿದ್ದರೆ ಇಡೀ ಬಿಲ್ಲವ ಸಮಾಜಕ್ಕೆ ಕರೆ ನೀಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಬಿಲ್ಲವ ಮುಖಂಡ ಅನಿ ಅಮೀನ್ ಬಂಟ್ವಾಳ ಮಾತನಾಡಿ, ಎಸ್ಪಿ ಮನವಿ ಸಲ್ಲಿಸಿ 10 ದಿನಗಳಾದರೂ ಆರೋಪಿಗಳನ್ನು ಬಂಧಿಸಿಲ್ಲ. ಶಂಕರ ಶಾಂತಿ ಹೋರಾಟ ನಡೆಸುತ್ತಿರುವುದು ಸಮಾಜಕ್ಕಾಗಿಯೇ ಹೊರತು ತನ್ನ ಮನೆಗಾಗಿ ಅಲ್ಲ. ಆದುದರಿಂದ ಅವರ ಪರವಾಗಿ ಸಮಾಜ ನಿಲ್ಲಬೇಕಾಗಿದೆ. ಈ ನಿಟ್ಟಿನಲ್ಲಿ ಯುವಕರು ಎದ್ದು ನಿಂತು ಹೋರಾಟ ನಡೆಸಬೇಕು ಎಂದು ತಿಳಿಸಿದರು.

ಆಕಾಶ್‌ರಾಜ್ ಜೈನ್ ಮಾತನಾಡಿ, ಬಾರಕೂರು ಜೈನ ಬಸದಿ ಆಕ್ರಮಣ ತೆರವಿಗಾಗಿ ಶಂಕರ ಶಾಂತಿ ಹೋರಾಟ ನಡೆಸುತ್ತಿದ್ದಾರೆ. ಅವರ ಪರವಾಗಿ ಜೈನ ಸಮುದಾಯ ನಿಂತಿದ್ದು, ನ್ಯಾಯ ಒದಗಿಸುವಂತೆ ವಿವಿಧೆಡೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಗುವುದು. ಹಲ್ಲೆಗೆ ಒಳಗಾದವರಿಗೆ ರಕ್ಷಣೆ ನೀಡಬೇಕಾಗಿರುವುದು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ದಯಾನಂದ ಕರ್ಕೇರ, ಮಾಧವ ಬನ್ನಂಜೆ, ಶಿವಾನಂದ ಗಂಗೊಳ್ಳಿ, ನಗರಸಭಾ ಸದಸ್ಯ ಸುಂದರ ಜೆ.ಕಲ್ಮಾಡಿ, ಪ್ರವೀಣ್ ಕೊಡವೂರು, ಮದನ್ ಎಸ್.ಪೂಜಾರಿ, ದೀಪಕ್, ಸುಲೋಚನಾ ದಾಮೋ ದರ್ ಮೊದಲಾದವರು ಉಪಸ್ಥಿತರಿದ್ದರು.

ವಿಶೇಷ ತಂಡ ರಚನೆ: ಡಿವೈಎಸ್ಪಿಪ್ರಕರಣವನ್ನು ಗಂಭೀರವಾಗಿ ಪರಿಣಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಪ್ರಕರಣದ ತನಿಖೆ ನಡೆಸಿ ಶೀಘ್ರಗತಿಯಲ್ಲಿ ಕ್ರಮ ಕೈಗೊಳ್ಳುವಂತೆ ತನಿಖಾಧಿಕಾರಿಗೆ ಸೂಚನೆ ನೀಡಲಾಗಿದೆ. ಅದೇ ರೀತಿ ಈ ವಿಚಾರವನ್ನು ಮೇಲಾಧಿಕಾರಿಗಳಿಗೂ ತಿಳಿಸಲಾಗುವುದು ಎಂದು ಉಡುಪಿ ಡಿವೈಎಸ್ಪಿ ಶಿವಾನಂದ ನಾಯ್ಕ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News