ಆಸ್ಪತ್ರೆ ಪಕ್ಕದ ಶಾಲೆಯ ಅಭಿವೃದ್ಧಿಗೆ ಸಿದ್ಧ: ಬಿ.ಆರ್.ಶೆಟ್ಟಿ

Update: 2021-03-01 14:23 GMT

ಉಡುಪಿ, ಮಾ.1: ಹುಟ್ಟೂರಿನ ಜನರಿಗಾಗಿ ಈಗಾಗಲೇ ನಿರ್ಮಿಸಿರುವ ತಾಯಿ-ಮಕ್ಕಳ ಆಸ್ಪತ್ರೆಯೊಂದಿಗೆ, 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಎದು ರಾಗಿರುವ ಸಮಸ್ಯೆಯನ್ನು ಬಗೆಹರಿಸಿದರೆ ಶೀಘ್ರವೇ ಕಾಮಗಾರಿಯನ್ನು ಪ್ರಾರಂಭಿಸು ವುದಾಗಿ ಬಿಆರ್‌ಎಸ್ ವೆಂಚೂರ್ಸ್‌ನ ಅಧ್ಯಕ್ಷ, ಅನಿವಾಸಿ ಭಾರತೀಯ ಉದ್ಯಮಿ ಉಡುಪಿಯ ಬಿ.ಆರ್.ಶೆಟ್ಟಿ ಹೇಳಿದ್ದಾರೆ.

ನಗರದ ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮೊದಲ ಹಾಗೂ ಫೆ.24ರಂದು ಹುಟ್ಟಿದ 10,000ನೇ ಶಿಶುವಿನ ಜನನದ ಸಂಭ್ರಮವನ್ನು ಆಚರಿಸಲು ಆಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಂಡ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ನಗರದಲ್ಲಿ ವಾಹನ ಪಾರ್ಕಿಂಗ್‌ಗೆ ಇರುವ ಕೊರೆಯನ್ನು ಮನಗಂಡು ಮೂರು ಬೇಸ್‌ಮೆಂಟ್ ಪಾರ್ಕಿಂಗ್ ಮಾಡಲು ನಾವು ನಿರ್ದರಿಸಿದ್ದೆವು. ಆದರೆ ಎರಡು ಬೇಸ್‌ಮೆಂಟ್‌ಗೆ ಮಾತ್ರ ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿ ನಗರಸಭೆಯಲ್ಲಿ ಅನುಮತಿ ಇನ್ನು ಸಿಕ್ಕಿಲ್ಲ. ಅನುಮತಿ ನೀಡಲು ಕಾನೂನಿನ ತಿದ್ದುಪಡಿಯಾಗಬೇಕಾಗಿದೆ. ಇದಕ್ಕಾಗಿ ಸಂಬಂಧಿತರಿಗೆ ಮನವಿ ಮಾಡಲಾಗಿದೆ ಎಂದರು.

ಅಲ್ಲದೇ ಆಸ್ಪತ್ರೆಯ ಪಕ್ಕದಲ್ಲೇ, ಕೆಎಂ ಮಾರ್ಗದಲ್ಲಿರುವ ಮಹಾತ್ಮಗಾಂಧಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಜೀರ್ಣಾವಸ್ಥೆ ಯಲ್ಲಿದ್ದು, ಅದನ್ನು ನಮಗೆ ನೀಡಿದರೆ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಿ ನಡೆಸುತ್ತೇವೆ. ಅದೇ ರೀತಿ ಉಡುಪಿಯ ಭುಜಂಗ ಪಾರ್ಕ್ ಅಥವಾ ಅಜ್ಜರಕಾಡಿನಲ್ಲಿ ಡಾ.ವಿ.ಎಸ್.ಆಚಾರ್ಯರ ಪ್ರತಿಮೆಯನ್ನು ನಿಲ್ಲಿಸಲು ತಗಲುವ ಖರ್ಚನ್ನು ತಾನು ನೀಡುವುದಾಗಿ ಬಿ.ಆರ್.ಶೆಟ್ಟಿ ನುಡಿದರು.

ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 200 ಬೆಡ್‌ಗಳಲ್ಲಿ ಹಿಂದಿದ್ದ 70 ಬೆಡ್‌ಗಳನ್ನು ನಡೆಸಲು ಹಿಂದಿನಂತೆ ಒಂದು ಯುನಿಟ್ ಸರಕಾರಿ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಅವಕಾಶ ನೀಡಬೇಕು. ನಗರಾಭಿವೃದ್ಧಿ ಪ್ರಾಧಿಕಾರರಿಂದ ಮೂರು ಬೇಸ್‌ಮೆಂಟ್ ನಿರ್ಮಾಣಕ್ಕೆ ಬೇಕಾದ ತಿದ್ದುಪಡಿಗೆ ಒಪ್ಪಿಗೆ ನೀಡುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಸಂಸ್ಥೆಯಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಇರುವ ತಾಂತ್ರಿಕ ತೊಂದರೆಯ ಬಗ್ಗೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಆಸ್ಪತ್ರೆಯಲ್ಲಿ ನೀಡುತ್ತಿರುವ ಉತ್ತಮ ಸೇವೆಗಾಗಿ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News