ಮಂಗಳೂರು ವಿವಿ ಅಂತರ್ ಕಾಲೇಜು: ಪುರುಷ-ಮಹಿಳೆಯರ ಕ್ರೀಡಾಕೂಟಕ್ಕೆ ಚಾಲನೆ

Update: 2021-03-01 14:26 GMT

ಉಡುಪಿ, ಮಾ.1: ಮಂಗಳೂರು ವಿಶ್ವವಿದ್ಯಾಲಯ, ಉಡುಪಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಜ್ಜರಕಾಡು ಡಾ.ಜಿ.ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಉಡುಪಿ ಜಿಲ್ಲಾ ಅಮೆಚೂರು ಅತ್ಲೆಟಿಕ್ ಅಸೋಸಿಯೇಶನ್‌ಗಳ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ 40ನೆ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಹಾಗೂ ಉಡುಪಿ ಜಿಲ್ಲಾ ಮಟ್ಟದ ಕಿರಿಯರ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೋಮವಾರ ಚಾಲನೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಪಂ ಅಧ್ಯಕ್ಷ ದಿನಕರ ಬಾಬು ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸ ಬೇಕು. ಕ್ರೀಡೆಯಿಂದ ಆತ್ಮ ವಿಶ್ವಾಸ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಕೊರೋನಾ ಲಾಕ್‌ಡೌನ್ ನಂತರ ಇಡೀ ರಾಜ್ಯದಲ್ಲಿ ಕ್ರೀಡಾಕೂಟ ಸ್ತಬ್ಧ ವಾದಾಗ ಉಡುಪಿ ಜಿಲ್ಲೆಯಲ್ಲಿ ಹಲವಾರು ಕ್ರೀಡಾಕೂಟಗಳು ನಡೆಸಲಾಗಿದೆ ಎಂದರು.

ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ಡಾ.ಜಾನ್ ಪಿಂಟೋ ಹಾಗೂ ಡಾ.ರೋಶನ್ ಕುಮಾರ್ ಶೆಟ್ಟಿ ಬರೆದಿರುವ ‘ಕಾಲೇಜುಗಳಲ್ಲಿ ದೈಹಿಕ ಶಿಕ್ಷಣದ ಮಹತ್ವ’ ಎಂಬ ಪುಸ್ತಕವನ್ನು ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಅಟೆಂಡರ್ ಚಂದ್ರಹಾಸ ಅವರನ್ನು ಸನ್ಮಾನಿಸಲಾಯಿತು.

ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ದ.ಕ ಮತ್ತು ಉಡುಪಿ ಮೀನು ಮಾರಾಟ ಮಹಾಮಂಡಳ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉಡುಪಿ ಜಿಲ್ಲಾ ಅಮೆ ಚೂರು ಅತ್ಲೆಟಿಕ್ ಅಸೋಸಿಯೇಷನ್ ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಅಧ್ಯಕ್ಷ ಕೆಂಪರಾಜ್ ಎಚ್.ಬಿ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಜೇಮ್ಸ್ ಒಲಿವೇರಾ ಉಪಸ್ಥಿತರಿದ್ದರು.

ಮಂಗಳೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಕಿಶೋರ್‌ಕುಮಾರ್ ಸಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಜಿ.ಶಂಕರ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟದಲ್ಲಿ 800ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News