ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಅನಿವಾರ್ಯ : ದಿನೇಶ್ ಅಮೀನ್ ಮಟ್ಟು

Update: 2021-03-01 15:33 GMT

ಮಂಗಳೂರು, ಮಾ.1: ಸರಕಾರವೇ ಖಾಸಗೀಕರಣಗೊಳ್ಳುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸುವ ಸಲುವಾಗಿ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀಡುವುದು ಅನಿವಾರ್ಯವಾಗಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.

ಮಂಗಳೂರಿನ ವಿಕಾಸ ಬಳಗವು ಸೋಮವಾರ ನಗರದ ವಿಕಾಸ ಕಚೇರಿಯಲ್ಲಿ ಏರ್ಪಡಿಸಿದ ‘ಮೀಸಲಾತಿ ಹೋರಾಟ : ಆತಂಕಗಳು, ಸಾಧ್ಯತೆಗಳು’ ಎಂಬ ವಿಷಯದಲ್ಲಿ ನಡೆದ ಸಂವಾದಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸರಕಾರವೇ ಉದ್ಯೋಗ ನೀಡುವ ಬದಲು ಹೊರಗುತ್ತಿಗೆಯ ಆಧಾರದ ಮೇಲೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ. ಜೊತೆಗೆ ಪ್ರತಿಯೊಂದು ಕ್ಷೇತ್ರವನ್ನು ಖಾಸಗೀಕರಣಗೊಳಿಸುತ್ತಿವೆ. ಹಾಗಾಗಿ ಮೀಸಲಾತಿಯ ಪ್ರಯೋಜನ ಅರ್ಹ ಎಲ್ಲರಿಗೂ ಲಭಿಸಬೇಕಿದ್ದರೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಬೇಕಿದೆ ಎಂದು ದಿನೇಶ್ ಅಮೀನ್ ಮಟ್ಟು ನುಡಿದರು.

ಮೀಸಲಾತಿಗಾಗಿ ಪಂಚಮಸಾಲಿಗಳು ನಡೆಸುವ ಹೋರಾಟಕ್ಕೆ ಸೂಕ್ತ ನೆಲೆಗಟ್ಟಿಲ್ಲ. ಪ್ರಾಯೋಗಿಕವೂ ಅಲ್ಲ. ಅವರ ಹೋರಾಟವು ಮುಖ್ಯಮಂತ್ರಿ ಯಡಿಯೂರಪ್ಪರಿಗೆ ವಿರುದ್ಧ ಎಂಬಂತಹ ದಿಕ್ಕಿನಲ್ಲಿ ಸಾಗುತ್ತಿವೆ.ಹಿಂದುಳಿದ ವರ್ಗಗಳ ಸುಮಾರು 101 ಜಾತಿಗಳ ಜನರು ಇದೀಗ ಅನಾಥ ಮಗುವಿನಂತಾಗಿದ್ದಾರೆ. ಪ್ರಬಲ ಜಾತಿಯ ಮಧ್ಯೆ ಒಡಕು ಸೃಷ್ಟಿಸುವ ಪ್ರಯತ್ನ ಸಕ್ರಿಯವಾಗಿದೆ. ಒಳಮೀಸಲಾತಿಯ ಅನಿವಾರ್ಯತೆಯನ್ನು ಬಿಜೆಪಿ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿವೆ. ಮುಸ್ಲಿಮರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿಲ್ಲ. ಹಾಗಾಗಿ ಮೀಸಲಾತಿಯಿಂದ ವಂಚಿತರಾದವರಿಗೆ ಸ್ಥಾನಮಾನ, ಉದ್ಯೋಗ ಭದ್ರತೆ, ಪ್ರಾತಿನಿಧ್ಯ ನೀಡುವ ಸಲುವಾಗಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಮಟ್ಟು ಅಭಿಪ್ರಾಯಪಟ್ಟರು.

ಸಾಮಾಜಿಕ ನ್ಯಾಯದ ಹೋರಾಟಕ್ಕೆ ಸಂಬಂಧಿಸಿದಂತೆ ಕರ್ನಾಟಕವು ದೇಶಕ್ಕೆ ಮಾದರಿಯಾಗಬೇಕಿತ್ತು. ಆದರೆ, ಸದ್ಯದ ಪರಿಸ್ಥಿತಿ ಅದಕ್ಕೆ ವ್ಯತಿರಿಕ್ತವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ನೀಡಲು ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ತಯಾರಿಸಲಾದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ಕುರಿತ ಸಮೀಕ್ಷಾ ವರದಿ ಬಿಡುಗಡೆಯಾಗದಿರುವುದು ವಿಪರ್ಯಾಸ ಎಂದ ಮಟ್ಟು ಮೀಸಲಾತಿಯು ಬಡತನ ನಿರ್ಮೂಲನೆ ಮಾಡಲು ಇರುವಂತದ್ದಲ್ಲ. ಅದು ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಕಲ್ಪಿಸುವ ವ್ಯವಸ್ಥೆಯಾಗಿದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಒಂದು ಕಾಲದಲ್ಲಿ ಮೀಸಲಾತಿಯ ಫಲಾನುಭವಿಗಳೇ ಇಂದು ಮೀಸಲಾತಿಯನ್ನು ವಿರೋಧಿಸುತ್ತಿರುವುದು ವಿಪರ್ಯಾಸ. ಭೂಸುಧಾರಣೆಯ ಕಾಯ್ದೆಯ ಕೆಲವು ಫಲಾನುಭವಿಗಳ ನಿಲುವು ಅದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದ ಮಟ್ಟು ವಿಧಾನಸಭೆ, ವಿಧಾನಪರಿಷತ್, ಲೋಕಸಭೆ, ರಾಜ್ಯಸಭೆಯಲ್ಲೂ ಮೀಸಲಾತಿ ಬೇಕು. ನ್ಯಾಯಾಂಗ ಮತ್ತು ಮಾಧ್ಯಮ ರಂಗದಲ್ಲೂ ಕೂಡ ಮೀಸಲಾತಿ ಕಲ್ಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ರೈತ ಸಂಘದ ಯಾದವ ಶೆಟ್ಟಿ, ವಿಚಾರವಾದಿ ನರೇಂದ್ರ ನಾಯಕ್, ನ್ಯಾಯವಾದಿ ಯಶವಂತ ಮರೋಳಿ, ಸಮುದಾಯ ಸಂಘಟನೆಯ ಮುಖಂಡ ವಾಸುದೇವ ಉಚ್ಚಿಲ್, ನಿವೃತ್ತ ಪ್ರಾಂಶುಪಾಲ ಡಾ. ಇಸ್ಮಾಯೀಲ್ ಎನ್.ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News