​ಉಡುಪಿ: 85 ಮಂದಿ ಹಿರಿಯ ನಾಗರಿಕರಿಗೆ ಲಸಿಕೆ ನೀಡಿಕೆ

Update: 2021-03-01 15:40 GMT

 ಉಡುಪಿ, ಮಾ.1: ಜಿಲ್ಲೆಯಲ್ಲಿ ಸೋಮವಾರ 60 ವರ್ಷ ಮೇಲ್ಪಟ್ಟ ಒಟ್ಟು 85 ಮಂದಿ ಹಿರಿಯ ನಾಗರಿಕರು ಕೋವಿಡ್‌ಗಾಗಿ ಲಭ್ಯವಿರುವ ಕೋವಿಶೀಲ್ಡ್ ಲಸಿಕೆಯನ್ನು ಪಡೆದು ಕೊಂಡಿದ್ದಾರೆ ಎಂದು ಡಿಎಚ್‌ಓ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದಿನಿಂದ ದೇಶಾದ್ಯಂತ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ 40ರಿಂದ 59 ವರ್ಷದೊಳಗಿನ ಬೇರೆ ಕಾಯಿಲೆಯಿಂದ ಬಳಲುವವರಿಗೆ ಮೂರನೇ ಹಂತದಲ್ಲಿ ಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇಂದು 85 ಮಂದಿ ಹಿರಿಯ ನಾಗರಿಕರಿಗೆ ಹಾಗೂ ಇಬ್ಬರು 40-59 ವಯೋಮಾನದವರಿಗೆ ಲಸಿಕೆ ನೀಡಲಾಗಿದೆ ಎಂದವರು ತಿಳಿಸಿದರು.

ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ 8, ಕುಂದಾಪುರದಲ್ಲಿ 11, ಉಡುಪಿಯ ಟಿಎಂಎ ಪೈ ಆಸ್ಪತ್ರೆಯಲ್ಲಿ 26, ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ 21 ಹಾಗೂ ಜಿಲ್ಲಾಸ್ಪತ್ರೆಯಲ್ಲಿ 19 ಮಂದಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಕಾರ್ಕಳ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ಬೇರೆ ಕಾಯಿಲೆ ಇರುವವರು ಲಸಿಕೆ ಪಡೆದಿದ್ದಾರೆ.

ಉಳಿದಂತೆ ಮೂವರು ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಪಡೆದರೆ, ಎಂಟು ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ. 29 ಮಂದಿ ಫ್ರಂಟ್‌ಲೈನ್ ಕಾರ್ಯಕರ್ತರು ಸಹ ಮೊದಲ ಡೋಸ್ ಪಡೆದಿದ್ದಾರೆ. ಈ ಮೂಲಕ ಇಂದು ಒಟ್ಟು 119 ಮಂದಿ ಮೊದಲ ಡೋಸ್ ಪಡೆದರೆ, ಎಂಟು ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರು ಎಂದು ಡಾ.ಸೂಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News