ಯುಪಿಸಿಎಲ್ : ಒಡೆದ ಪೈಪ್‌ನಲ್ಲಿ ನೇರ ಸಮುದ್ರ ಸೇರುತ್ತಿರುವ ತ್ಯಾಜ್ಯ ನೀರು

Update: 2021-03-01 16:05 GMT

ಪಡುಬಿದ್ರಿ, ಮಾ.1: ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಕಲ್ಲಿದ್ದಲು ಆಧಾರಿತ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದಿಂದ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಕೊಂಡೊಯ್ಯಲು ಅಳವಡಿಸಿ ತಿಂಗಳ ಹಿಂದೆ ತುಂಡಾಗಿ ಬಿದ್ದಿರುವ ಪೈಪ್‌ನಲ್ಲೇ ಮತ್ತೆ ತ್ಯಾಜ್ಯದ ನೀರು ಬರಲಾರಂಭಿಸಿದ್ದು, ಸ್ಥಳೀಯರು, ವಿಶೇಷವಾಗಿ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಒಡೆತನದ ಯುಪಿಸಿಎಲ್ ವಿದ್ಯುತ್ ಸ್ಥಾವರಕ್ಕೆ ಸಮುದ್ರದ ನೀರನ್ನು ಕೊಳವೆಯಲ್ಲಿ ಸರಬರಾಜು ಮಾಡಿ ಬಳಿಕ ಉಪಯೋಗಿಸಿದ ನೀರನ್ನು ಸಂಸ್ಕರಿಸಿ ಮತ್ತೆ ಸಮುದ್ರಕ್ಕೆ ಬಿಡಲು 10 ವರ್ಷಗಳ ಹಿಂದೆ ಎರ್ಮಾಳು ತೆಂಕ ಸಮುದ್ರಕ್ಕೆ ಕೊಳವೆ ಯನ್ನು ಅಳವಡಿಸಲಾಗಿತ್ತು. ಆದರೆ ಎರಡು ತಿಂಗಳ ಹಿಂದೆ ಕೊಳವೆ ತುಂಡಾಗಿದ್ದು, ಸಮುದ್ರ ತೀರದಲ್ಲಿ ಅದು ಬಿದ್ದುಕೊಂಡಿದೆ. ಇದರಿಂದಲೇ ಕಂಪೆನಿ ಉಪಯೋಗಿಸಿದ ನೀರನ್ನು ಹೊರಬಿಡಲಾಗುತ್ತದೆ ಎಂದು ಸ್ಥಳೀಯರು ಕಂಪೆನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಕಳೆದ ಶನಿವಾರ ಜಿಲ್ಲಾಧಿಕಾರಿ ಜಿ. ಜಗದೀಶ್ ಹಾಗೂ ಶಾಸಕ ಲಾಲಾಜಿ ಮೆಂಡನ್ ಅವರು ಕಂಪೆನಿಯ ಮುಖ್ಯಸ್ಥರೊಂದಿಗೆ ಕೊಳವೆ ಸರಿಪಡಿಸುವರೆಗೆ ಕಂಪೆನಿ ಉಪಯೋಗಿಸಿದ ನೀರನ್ನು ಹೊರಬಿಡದಂತೆ ಸೂಚಿಸಿದ್ದರು. ಆದರೆ ಕಂಪೆನಿ ಮುಖ್ಯಸ್ಥರು ಇದನ್ನು ನಿರಾಕರಿಸಿದ್ದು, ತುಂಡಾದ ಪೈಪ್‌ನಲ್ಲಿ ನೀರು ಬಿಡುತ್ತಿಲ್ಲ ಎಂದು ಉತ್ತರಿಸಿದ್ದರು.

ಅದರೆ ಸೋಮವಾರ ಮತ್ತೆ ಈ ಕೊಳವೆಯಲ್ಲಿ ನೀರು ಬರುತ್ತಿರುವ ವಿಡಿಯೋವನ್ನು ಇದೀಗ ಸ್ಥಳೀಯರು ಸೆರೆ ಹಿಡಿದಿದ್ದು, ಕಂಪೆನಿ ಮತ್ತೆ ತುಂಡಾದ ಕೊಳವೆಯಲ್ಲೇ ತಾಜ್ಯ ನೀರನ್ನು ಬಿಡುತ್ತಿದೆ ಎಂದು ಪುರಾವೆಯೊಂದಿಗೆ ಆರೋಪಿಸಿದ್ದಾರೆ.

ಈ ರೀತಿ ಪೈಪ್‌ನಲ್ಲಿ ನೀರು ಬಿಡುವುದರಿಂದ ಮೀನು ಸಂತತಿ ನಾಶವಾಗಿ ಮೀನುಗಾರಿಕೆ ಕ್ಷಾಮ ಉಂಟಾಗಲಿದೆ ಎಂದು ಆತಂಕವನ್ನು ಸ್ಥಳೀಯ ಮೀನುಗಾರರು ವ್ಯಕ್ತಪಡಿಸಿದ್ದಾರೆ. ಕಂಪೆನಿಗೆ ಪೈಪ್‌ಲೈನ್ ಅಳವಡಿಕೆಯ ವೇಳೆ ಹಲವು ಶರತ್ತುಗಳನ್ನು ಪರಿಸರ ಇಲಾಖೆ ವಿಧಿಸಿತ್ತು. ಅವುಗಳಲ್ಲಿ ನಿಯಮಿತವಾಗಿ ಪೈಪ್‌ಲೈನ್‌ಗಳ ತಪಾಸಣೆ, ಮೂರನೇ ಸ್ವತಂತ್ರ ಸಂಸ್ಥೆಯಿಂದ ಮಾನಿಟರಿಂಗ್ ನಡೆಸಬೇಕೆಂಬ ಶರತ್ತುಗಳಿವೆ. ಆದರೆ ಇಲ್ಲಿ ಪೈಪ್‌ಲೈನ್ ತುಂಡಾಗಿ ತಿಂಗಳು ಕಳೆದರೂ ಯಾರೂ ಸಹ ಈ ಬಗ್ಗೆ ಗಮನ ಹರಿಸಿಲ್ಲ. ಅದರ ದುರಸ್ತಿಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಇಲಾಖೆಯ ಕಾರ್ಯವೈಖರಿ ಮೇಲೆ ಬೆಳಕು ಚೆಲ್ಲುತ್ತದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News