ಐಷಾರಾಮಿ ಕಾರು ಮಾರಾಟ ಪ್ರಕರಣ : ಮತ್ತಿಬ್ಬರು ಪೊಲೀಸರ ಅಮಾನತು

Update: 2021-03-01 16:32 GMT

ಮಂಗಳೂರು, ಮಾ.1: ವಂಚನೆ ಪ್ರಕರಣದ ಆರೋಪಿಗಳ ಐಷಾರಾಮಿ ಕಾರನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿಯ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಇದರೊಂದಿಗೆ ಅಮಾನತುಗೊಂಡವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಈ ಆರೋಪದಲ್ಲಿ ನಾರ್ಕೊಟಿಕ್ ಆ್ಯಂಡ್ ಇಕಾನಮಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಾಮಕೃಷ್ಣ ಮತ್ತು ಪ್ರಸ್ತುತ ಚಿಕ್ಕಮಗಳೂರು ಡಿಸಿಆರ್‌ಬಿ ಎಸ್ಸೈ ಕಬ್ಬಾಳ್ ‌ರಾಜ್ ಎಂಬವರನ್ನು ಫೆ.27ರಂದು ಅಮಾನತುಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದರು. 

ಈ ಆದೇಶದ ಆಧಾರದಲ್ಲೇ ಮಂಗಳೂರು ಪೊಲೀಸ್ ಕಮಿನಷರ್ ಎನ್. ಶಶಿಕುಮಾರ್ ಅವರು ಕಾರು ಮಾರಾಟ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸಿಸಿಬಿ ಹೆಡ್‌ಕಾನ್ಸ್‌ಟೇಬಲ್ ಆಶಿತ್ ಡಿಸೋಜ ಮತ್ತು ರಾಜಾ ಎಂಬವರನ್ನು ಅಮಾನತುಗೊಳಿಸಿದ್ದಾರೆ.

ಅಮಾನತುಗೊಂಡ ಆರೋಪಿಗಳು ಕಾರು ಮಾರಾಟದಲ್ಲಿ ಭಾಗಿಯಾಗಿರುವ ಬಗ್ಗೆ ಮಂಗಳೂರು ನಗರ ಡಿಸಿಪಿ ವಿನಯ್ ಗಾಂವ್ಕರ್ ನೀಡಿದ ಆಂತರಿಕ ತನಿಖೆಯ ಮಧ್ಯಂತರ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಅಮಾನತುಗೊಳಿಸಿ ಆದೇಶಿಸಲಾಗಿದೆ.

ಬೆಂಗಳೂರಿನಲ್ಲಿ ವಿಚಾರಣೆ: ಅಮಾನತುಗೊಂಡ ಆರೋಪಿಗಳಾದ ಕಬ್ಬಾಳ್ ‌ರಾಜ್, ರಾಮಕೃಷ್ಣ, ಆಶಿತ್ ಡಿಸೋಜ, ರಾಜಾ ಹಾಗೂ ಮಧ್ಯವರ್ತಿ ದಿವ್ಯದರ್ಶನ್‌ಗೆ ರಾಜ್ಯ ಸಿಐಡಿ (ಕೇಂದ್ರ ತನಿಖಾ ದಳ) ನೋಟಿಸ್ ನೀಡಿದ್ದು, ನಾಲ್ಕು ಮಂದಿಯೂ ವಿಚಾರಣೆಗಾಗಿ ಬೆಂಗಳೂರು ಸಿಐಡಿ ಕಚೇರಿಗೆ ತೆರಳಬೇಕಿದೆ. 

ತನಿಖಾಧಿಕಾರಿ ನಗರಕ್ಕೆ : ಕಾರು ಮಾರಾಟ ಪ್ರಕರಣದ ತನಿಖಾಧಿಕಾರಿ ಸಿಐಡಿ ಎಸ್ಪಿ ರೋಹಿಣಿ ಕಟ್ಟೋಚ್ ನೇತೃತ್ವದ ತಂಡ ಮಂಗಳವಾರ ಮಂಗಳೂರಿಗೆ ಆಗಮಿಸಿ ತನಿಖೆ ನಡೆಸುವ ಸಾಧ್ಯತೆಯಿದೆ. ಬಳಿಕ ತನಿಖಾಧಿಕಾರಿ ಸಮಗ್ರ ವರದಿಯನ್ನು ಸಿಐಡಿ ಡಿಜಿಗೆ ಸಲ್ಲಿಸಲಿದ್ದಾರೆ. ಆ ವರದಿಯನ್ನು ಸಿಐಡಿ ಡಿಜಿ ರಾಜ್ಯ ಡಿಜಿಪಿ ಪ್ರವೀಣ್ ಸೂದ್‌ರಿಗೆ ಸಲ್ಲಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News