ಮೋದಿಯ ಕೆಟ್ಟ ಆಡಳಿತ ಬಿಜೆಪಿಯವರಿಗೆ ಅರ್ಥವಾಗಲು ಶುರುವಾಗಿದೆ: ಸುಧೀರ್ ಕುಮಾರ್ ಮುರೊಳ್ಳಿ

Update: 2021-03-01 17:14 GMT

ಬಂಟ್ವಾಳ, ಮಾ.1: ಇಂಧನ, ಅಡುಗೆ ಅನಿಲ, ದಿನ ಬಳಕೆ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ, ಅರ್ಧ ವ್ಯವಸ್ಥೆ ಕುಸಿತದ ಬಗ್ಗೆ ಪ್ರಶ್ನಿಸಿದರೆ ಪಾಕಿಸ್ತಾನ, ಚೀನಾ, ಕೊರೋನ, ಪಿ.ಎಫ್.ಐ. ಬಗ್ಗೆ ಮಾತನಾಡಿ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸುತ್ತಿದ್ದ ಬಿಜೆಪಿಯ ಜನಪ್ರತಿನಿಧಿಗಳು ಮತ್ತು ನಾಯಕರಿಗೆ ಮೋದಿಯ ಕೆಟ್ಟ ಆಡಳಿತದ ಅರಿವು ನಿಧಾನವಾಗಿ ಆಗಲು ಶುರುವಾಗಿದೆ ಎಂದು ವಕೀಲ, ಸಾಮಾಜಿಕ ಹೋರಾಟಗಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.

ಇಂಧನ, ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ವಿರುದ್ಧ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ಬಿ.ಸಿ.ರೋಡಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. 

ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಏರಿಕೆ ಆದರೂ ಕಾಂಗ್ರೆಸ್ ಸರಕಾರ ಎಂದೂ ಪೆಟ್ರೋಲ್ ದರವನ್ನು 70 ರೂಪಾಯಿ ಮೀರಲು ಬಿಟ್ಟಿಲ್ಲ. ಇಂದು ಕಚ್ಚಾ ತೈಲದ ಬೆಲೆ ತೀರಾ ಕಡಿಮೆ ಇದ್ದರೂ ದೇಶದಲ್ಲಿ ಪೆಟ್ರೋಲ್ ಬೆಲೆ 100 ರೂ. ಮೀರಿದೆ. 30 ರೂಪಾಯಿಗೆ ಪೆಟ್ರೋಲ್, 25 ರೂಪಾಯಿಗೆ ಡೀಸೆಲ್‌ ಕೊಡುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದವರು ಮೌನವಾಗಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಬಿಜೆಪಿಯವರು ಕಾಂಗ್ರೆಸ್ ದೇಶಕ್ಕಾಗಿ ಮಾಡಿಟ್ಟ ಸಂಪತ್ತು, ಸಂಸ್ಥೆಗಳನ್ನು ಮಾರಾಟ ಮಾಡುತ್ತಿದೆ. ನೆಹರೂನಿಂದ ಮನಮೋಹನ್ ಸಿಂಗ್ ವರೆಗಿನ ಸರಕಾರದ ಬಜೆಟ್ ನಲ್ಲಿ ದೇಶಕ್ಕೆ ವಿಶೇಷ ಸಂಸ್ಥೆಯನ್ನು ಕಟ್ಟಿ ಕೊಡಲಾಗಿದೆ. ಈ ಬಾರಿಯ ಬಜೆಟ್‌ ನ ವಿಶೇಷ ಎಂದರೆ 2021 ಮುಗಿಯುವುದರೊಳಗೆ ದೇಶದ ಎಲ್ಲಾ ಸಂಸ್ಥೆಗಳನ್ನು ಮಾರಾಟ ಮಾಡಿ ಮುಗಿಸುತ್ತೇವೆ ಎನ್ನುವುದಾಗಿದೆ. ಬಿಜೆಪಿಯವರಿಗೆ ಒಡೆದು ಮತ್ತು ಮಾರಾಟ ಮಾಡಿ ಮಾತ್ರ ಗೊತ್ತು. ಅವರಿಗೆ ನಿರ್ಮಿಸಿ ಗೊತ್ತಿಲ್ಲ ಎಂದು ಅವರು ಹೇಳಿದರು. 

ನಿಮ್ಮ ಸರಕಾರ ಸರಿ ಇಲ್ಲ. ದೇಶದ ಅರ್ಧ ವ್ಯವಸ್ಥೆ ಪಾತಾಳಕ್ಕೆ ಕುಸಿಯುತ್ತಿದೆ‌. ಮನಮೋಹನ್ ಸಿಂಗ್ ಜೊತೆ ಸಲಹೆ ಪಡೆಯಿರಿ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಂ ಅವರ ಪತಿ ಕೇಂದ್ರ ಸರಕಾರಕ್ಕೆ ಸಲಹೆ ನೀಡುತ್ತಿದ್ದಾರೆ. ಆದರೆ ಇಂತಹ ಸಲಹೆಗಳು ಈರುಳ್ಳಿ ಬೆಲೆ ಹೆಚ್ಚಾಗಿದೆ ಎಂದರೆ ನಾನು ಈರುಳ್ಳಿ ತಿನ್ನಲ್ಲ ಎನ್ನುವ ಸಚಿವರಿಗೆ ಅರ್ಥ ಆಗುತ್ತಾ ಎಂದು ವ್ಯಂಗ್ಯವಾಡಿದರು. 

ಸಂಸದರಾದ ನಳಿನ್ ಕುಮಾರ್ ಕಟೀಲು ಮತ್ತು ಶೋಭಾ ಕರಂದ್ಲಾಜೆ ಎಂದೂ ಅಭಿವೃದ್ಧಿ ಬಗ್ಗೆ ಮಾತನಾಡಿಲ್ಲ. ಜನರ ಸಂಕಷ್ಟಗಳಿಗೆ ಸ್ಪಂದಿಸಿಯೂ ಇಲ್ಲ. ಜನಪರ ವಿಚಾರವೂ ಅವರಿಗೆ ಗೊತ್ತಿಲ್ಲ. ಕೇವಲ ಪಿ.ಎಫ್.ಐ., ಎಸ್.ಡಿ.ಪಿ.ಐ. ನಿಷೇಧಿಸಬೇಕು ಎಂದು ಹೇಳುತ್ತಲೇ ಕಾಲ ಕಳೆಯುತ್ತಿದ್ದಾರೆ. ಅವರದ್ದೇ ಸರಕಾರ ರಾಜ್ಯ ಮತ್ತು ಕೇಂದ್ರದಲ್ಲಿ ಇರುವಾಗ ಮತ್ತೇಕೆ ನಿಷೇಧ ಮಾಡುವುದಿಲ್ಲ ಎಂದು ಅವರು ಪ್ರಶ್ನಿಸಿದರು. 

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಸಾವಿರ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಜನರಿಗೆ ಹೊರೆಯಾಗುತ್ತಿದೆ. ಎಲ್ಲಾ ಭರವಸೆಗಳು ಹುಸಿಯಾಗಿದೆ. ಇದಕ್ಕೆ ನಮ್ಮಲ್ಲಿ ಸಾವಿರ ಸಾಕ್ಷಿಯಿದೆ. ಇಂಧನ, ಅನಿಲ, ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ನರಕಮಯವಾಗಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಈ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಜನರಿಗಾಗಿ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದರು.

ಕೈಕಂಬದಿಂದ ಬಿ.ಸಿ.ರೋಡು ಮಿನಿ ವಿಧಾನ ಸೌಧದವರೆಗೆ ನಡೆದ ಮೆರವಣಿಗೆಯಲ್ಲಿ ಬೆಲೆ ಏರಿಕೆಯಿಂದಾಗಿ ಮುಂದೆ ವಾಹನಗಳನ್ನು ಬಳಕೆ ಮಾಡುವ ಬದಲು ಹಿಂದಿನ ಕಾಲದಂತೆ ಕತ್ತೆಯಲ್ಲಿ ವಸ್ತುಗಳನ್ನು ಹೇರಿಕೊಂಡು ಬಂದರೆ, ಎತ್ತಿನಗಾಡಿಯನ್ನು ರಮಾನಾಥ ರೈ ಹೊತ್ತುಕೊಂಡು ಗಮನ ಸೆಳೆದರು. ಜಿಪಂ ಸದಸ್ಯರ ಸಹಿತ ಕೆಲವು ಸೈಕಲ್ ತುಳಿದು ಇಂಧನ ಬೆಲೆ ಏರಿಕೆಯನ್ನು ಖಂಡಿಸಿದರು. ಧರಣಿ ಸ್ಥಳದಲ್ಲಿ ಕಟ್ಟಿಗೆಯ ಒಲೆಯಲ್ಲಿ ತಯಾರಿಸಿದ ಗಂಜಿ ಊಟ ಮಾಡುವ ಮೂಲಕ ಧರಣಿ ನಿರತರು ಮುಂದೆ ಗ್ಯಾಸ್ ಸಿಲಿಂಡರ್ ಉಪಯೋಗಿಸುವ ಸ್ಥಿತಿಯಲ್ಲಿ ಇಲ್ಲ ಎಂಬುದನ್ನು ತಿಳಿಯಪಡಿಸುವ ಕಾರ್ಯ ನಡೆಯಿತು.

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುಧೀರ್ ಕುಮಾರ್, ಜಿಪಂ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್. ಮುಹಮ್ಮದ್, ಪದ್ಮಶೇಖರ ಜೈನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪ್ರಮುಖರಾದ ಜಯಂತಿ ಪೂಜಾರಿ, ಪದ್ಮನಾಭ ರೈ, ಸುದರ್ಶನ ಜೈನ್, ಜೋಸ್ಫಿನ್ ಡಿಸೋಜ, ಸದಾಶಿವ ಬಂಗೇರ, ಮಧುಸೂಧನ ಶೆಣೈ, ವೆಂಕಪ್ಪ ಪೂಜಾರಿ, ಮುಹಮ್ಮದ್ ನಂದಾವರ, ಜನಾರ್ದನ ಚೆಂಡ್ತಿಮಾರ್, ಲೋಲಾಕ್ಷ, ಗಂಗಾಧರ ಪೂಜಾರಿ, ಮಹಮ್ಮದ್ ನಂದರಬೆಟ್ಟು, ವಾಸು ಪೂಜಾರಿ, ಮಂಜುಳಾ ಕುಶಲ ಪೆರಾಜೆ, ಸಹಿತ ತಾಪಂ, ಪುರಸಭೆ ಸದಸ್ಯರು, ಪಕ್ಷದ ವಿವಿಧ ವಿಭಾಗಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಾಣಿ ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News