ಮೋದಿ ಸರ್ಕಾರದಿಂದ ಜನರ ನಿರೀಕ್ಷೆ ಸುಳ್ಳಾಗಿದೆ-ಶಕುಂತಳಾ ಶೆಟ್ಟಿ

Update: 2021-03-01 17:16 GMT

ಪುತ್ತೂರು : ನರೇಂದ್ರ ಮೋದಿ ಆಡಳಿತ ಚುಕ್ಕಾಣಿ ಹಿಡಿಯುವ ಸಂದರ್ಭ ದೇಶ ಸಂಪೂರ್ಣ ಬದಲಾವಣೆ ಕಾಣಲಿದೆ ಎಂಬ ನಿರೀಕ್ಷೆಯಿತ್ತು ಆದರೆ ಇದೀಗ ಆ ನಿರೀಕ್ಷೆ ಸುಳ್ಳಾಗಿದೆ. ನೈಜ ದೇಶಪ್ರೇಮಿಗಳು ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಅವರು ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಇಂದಿರಾ ಕ್ಯಾಂಟೀನ್ ಮುಚ್ಚುವ ಹುನ್ನಾರದ ವಿರುದ್ಧ ಸೋಮವಾರ ಪುತ್ತೂರಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದರು. 

 ದೇಶದ ರಕ್ಷಣೆಗಾಗಿ ಇರುವ ಕೇಂದ್ರ ಸರಕಾರಕ್ಕೆ ರಿಸರ್ವ್ ಬ್ಯಾಂಕ್‍ನಲ್ಲಿಟ್ಟ ಚಿನ್ನಾಭರಣ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಅನ್ಯಾಯ ಮಾಡುತ್ತಿದೆ. ಸಾಲದಕ್ಕೆ ಕಾಂಗ್ರೆಸ್ ಆಡಳಿತದ ಯೋಜನೆಯಾದ ಇಂದಿರಾ ಕ್ಯಾಂಟಿನ್ ಮುಚ್ಚಲು ವಿವಿಧ ನೆಪಗಳನ್ನಿಟ್ಟು ಬಡವರ ಹೊಟ್ಟೆಗೆ ಕಲ್ಲು ಹಾಕಲು ಹೊರಟಿದೆ. ಎಂದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಅಂಧ ಭಕ್ತರಿಂದ ಆಡಳಿತಕ್ಕೆ ಬಂದ ಕೇಂದ್ರ ಸರಕಾರ ಪ್ರಸ್ತುತ ವಿವಿಧ ರೀತಿಯಲ್ಲಿ ದೇಶವನ್ನೇ ಮಾರಾಟ ಮಾಡಲು ಹೊರಟಿದೆ. ದೇಶದ ಸಂಪತ್ತಾದ ವಿವಿಧ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಕರಣ ಮಾಡುವ ಮೂಲಕ ವಿದೇಶಿಗರು ನಡೆಸುವಂತೆ ನೀಡಿದೆ. ಪರಿಣಾಮ ಮತ್ತೊಮ್ಮೆ ನಾವೆಲ್ಲಾ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಪರಿಸ್ಥಿತಿ ಉಂಟಾಗಲಿದೆ. ಒಟ್ಟಾರೆ ಸರ್ವಾಧಿಕಾರ ಆಡಳಿತ ನಡೆಸುವ ಕೇಂದ್ರ ಸರಕಾರದ ವಿರುದ್ಧ ಎಚ್ಚೆತ್ತು ಹೋರಾಟ ಮಾಡಬೇಕಾಗಿದೆ ಎಂದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಹಮ್ಮದ್ ಬಡಗನ್ನೂರು, ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ, ಸದಸ್ಯ ವಿಶ್ವನಾಥ ರೈ ಎಂ.ಬಿ., ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಮಾಜಿ ಬ್ಲಾಕ್ ಅಧ್ಯಕ್ಷ ಪಝಲ್ ರಹೀಮ್, ಹಿರಿಯ ಮುಖಂಡ ಕಿಟ್ಟಣ್ಣ ಗೌಡ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಮಹಮ್ಮದಾಲಿ, ಕಾಂಗ್ರೆಸ್‍ನ ರಾಬಿನ್ ತಾವ್ರೋ, ಪರಮೇಶ್ವರ ಭಂಡಾರಿ, ಮಹಬಲ ರೈ ಒಳತ್ತಡ್ಕ, ಸ್ವರ್ಣಲತಾ ಹೆಗ್ಡೆ, ಶೈಲಜಾ ಅಮರನಾಥ್, ಬೂಡಿಯಾರ್ ಪುರುಷೋತ್ತಮ, ಜೋಕಿಂ ಡಿ'ಸೋಜಾ, ಡಾ.ರಾಜರಾಮ್, ಮತ್ತಿತರರು ಉಪಸ್ಥಿತರಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಸ್ವಾಗತಿಸಿದರು. ಇಸಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News