ಬೀಡಿಕಾರ್ಮಿಕರಿಗೆ ಸಾವಿರ ಬೀಡಿಗೆ 14.28 ರೂ. ಡಿ.ಎ. ಹೆಚ್ಚಳ - ಬಿ.ಎಂ.ಭಟ್

Update: 2021-03-01 17:20 GMT

ಪುತ್ತೂರು : ಈ ವರ್ಷದ ಬೆಲೆ ಏರಿಕೆಗನುಗುಣವಾಗಿ ಹೆಚ್ಚುವರಿ ಗ್ರಾಹಕ ಸೂಚ್ಯಾಂಕ 357 ಅಂಶಗಳಿಗೆ ತಲಾ 4 ಪೈಸೆಯಂತೆ ಬೀಡಿ ಕಾರ್ಮಿಕರಿಗೆ ತುಟ್ಟಿ ಭತ್ತೆ ಏರಿಕೆಯಾಗಿದ್ದು ಎ.1 ರಿಂದ ಸಾವಿರ ಬೀಡಿಗೆ ರೂ.14.28 ರಂತೆ ಹೆಚ್ಚುವರಿ ವೇತನ ಸಿಗಲಿದೆ ಎಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಅದ್ಯಕ್ಷರಾದ ಗುಡ್ಡಪ್ಪಗೌಡ ಸರ್ವೆ ಹಾಗೂ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್  ತಿಳಿಸಿದ್ದಾರೆ.

ಈಗ ಮಾಲಕರು ನೀಡುವ ಮಜೂರಿ ಪ್ರತಿ ಸಾವಿರ ಬೀಡಿಗೆ 200.94 ರೂ.ಆಗಿದ್ದು ಎ.1 ರಿಂದ ಪ್ರತಿ ಸಾವಿರ ಬೀಡಿಗೆ 215.22 ರೂ. ಸಿಗಲಿದೆ. ಇದರಿಂದ ಪಿ.ಎಫ್.  21 ರೂ. ಕಡಿತಗೊಂಡು ಕಾರ್ಮಿಕರ ಹಸ್ತ 194.22 ರೂ. ರಂತೆ ವೇತನ ಸಿಗಲಿದೆ. ಆದರೆ ಸರಕಾರ ನಿಗದಿಗೊಳಿಸಿದ ವೇತನದಂತೆ ಮಾಲಕರು ಈಗ ಪ್ರತಿ 1000 ಬೀಡಿಗೆ 240.92 ರೂ. ವೇತನ ನೀಡಬೇಕಾಗಿತ್ತು. ಆದರೆ ಮಾಲಕರು ನೀಡುತ್ತಿಲ್ಲ. ನಮ್ಮ ಹೋರಾಟ ನಡೆಯುತ್ತಿದ್ದರೂ ಸರಕಾರದ ಸ್ಪಂದನೆಇಲ್ಲದಾಗಿದೆ. ಈ ಏರಿಕೆ ಡಿ.ಎ. ಸೇರಿ ಪ್ರತಿ ಸಾವಿರ ಬೀಡಿಗೆ  255.20 ರಂತೆ ವೇತನ ಸಿಗಬೇಕಾಗಿದೆ.ಆದರೆ ಬೀಡಿ ಮಾಲಕರು ಈ ವೇತನವನ್ನು ಕಳೆದ 3 ವರ್ಷಗಳಿಂದ ನೀಡದೆ ವಂಚಿಸುತ್ತಾ ಬರುತ್ತಿದ್ದಾರೆ ಎಂದರು.

ಬೀಡಿ ಕೆಲಸವನ್ನು ಬಿಡುವಾಗ ಬೀಡಿ ಕಾರ್ಮಿಕರಿಗೆ ಬೀಡಿ ಮಾಲಕರು ಕಾನೂನು ಬದ್ಧವಾಗಿ ನೀಡಬೇಕಾದ ಗ್ರಾಚ್ಯುವಿಟಿ ಹಣವನ್ನು ಮಾಲಕರು ಮುಂದೆ ಕೊಡುತ್ತೇವೆ ಎಂದು ಹೇಳುತ್ತಾ ನೀಡದೆ ವಂಚಿಸುತ್ತಿರುವುದರ ವಿರುದ್ಧ ಹಾಗೂ ಬೀಡಿ ಕೈಗಾರಿಕೆಯನ್ನು ಕೋಟ್ಪಾ ಕಾಯಿದೆಯಿಂದ ಹೊರಗಿಡಬೇಕೆಂದು ಆಗ್ರಹಿಸಿ ಬೀಡಿ ಕಾರ್ಮಿಕರು ಹೋರಾಟ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News