ಸರ್ಕಾರದ ಬೇಜವಾಬ್ದಾರಿಯ ದುರಂತದಲ್ಲಿ ಮಡಿದ ಇನ್ನಷ್ಟು ಬಡ ಕಾರ್ಮಿಕರು: ಸುಲೈಮಾನ್ ಕಲ್ಲರ್ಪೆ

Update: 2021-03-01 18:22 GMT
ಸುಲೈಮಾನ್ ಕಲ್ಲರ್ಪೆ

ಬೆಂಗಳೂರು : ಚಿಕ್ಕಬಳ್ಳಾಪುರದ ಅಕ್ರಮ ಕಲ್ಲು ಕ್ವಾರಿ ಬಳಿ ಜಿಲೆಟಿನ್ ಸ್ಫೋಟದಿಂದಾಗಿ, ಆರು ಜನ ಬಡಕಾರ್ಮಿಕರ ಅಮೂಲ್ಯ ಜೀವಗಳು ನಷ್ಟಗೊಂಡಿರುವುದಕ್ಕೆ ಮತ್ತೆ ರಾಜ್ಯ ಸರ್ಕಾರದ ಬೇಜವಾಬ್ದಾರಿಯೇ ಕಾರಣವಾಗಿದ್ದು ಸರ್ಕಾರದ ನಿರ್ಲಕ್ಷ್ಯತನಕ್ಕೆ ಇನ್ನೆಷ್ಟು ಅಮಾಯಕರ  ಬಲಿಯಾಗಬೇಕು ?’ ಎಂದು ದುರಂತದಿಂದ ಮೃತಪಟ್ಟಿರುವ ಕಾರ್ಮಿಕರ ಕುಟುಂಬದ  ಬಗ್ಗೆ  ದುಃಖವನ್ನು ವ್ಯಕ್ತಪಡಿಸಿದ ಎಫ್.ಐ.ಟಿ.ಯು. ರಾಜ್ಯಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಹೇಳಿದರು.

ಇಷ್ಟೊಂದು ಸಾವು ನೋವುಗಳಿಗೆ ಕಾರಣವಾದ ಆಡಳಿತ ವರ್ಗದ ಹೊಣೆಗೇಡಿತನಕ್ಕಾಗಿ ರಾಜ್ಯ ಸರ್ಕಾರವನ್ನು ಖಂಡಿಸಿದ ಅವರು, ಶಿವಮೊಗ್ಗದಲ್ಲಿನ ಸ್ಫೋಟ ಸಮಯದಲ್ಲೇ, ಅಲ್ಲಿನ ಶಾಸಕರೂ ಆಗಿದ್ದ ರಾಜ್ಯದ, ಗ್ರಾಮೀಣಾಭಿವೃದ್ಧಿ ಸಚಿವರಾದ ಈಶ್ವರಪ್ಪ ನೇರ ಹೊಣೆಯಾಗಿರುವ ಕಾರಣ ಆರಂಭದಲ್ಲೇ ಅವರ ರಾಜೀನಾಮೆಗೆ ಒತ್ತಾಯಿಸಿ ಧ್ವನಿಯೆತ್ತಿದ್ದೆ ಆದರೆ ಅಂದು ವಿಪಕ್ಷಗಳು ಕೂಡಾ ಇದರ ಬಗ್ಗೆ  ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ, ಇದೀಗ ದುರಂತ ಮತ್ತೆ ಮರುಕಳಿಸಿದೆ ಒಟ್ಟಿನಲ್ಲಿ ಕಾರ್ಮಿಕ ಜೀವಗಳಿಗೆ ಬೆಲೆ ಇಲ್ಲವಾಗಿದೆ. ಸ್ಫೋಟಕಗಳ ನಿರ್ವಹಣೆ, ಸಾಗಣೆ ಬಗ್ಗೆ ಒಂದು ಸುರಕ್ಷಿತ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆಯೇ ಎಂಬುವುದನ್ನು ಯಾವುದೇ ಅಧಿಕಾರಿಗಳ ಪರಿಶೀಲನೆ ಇಲ್ಲದೆ ಪರವಾನಿಗೆ ನೀಡಲಾಗಿತ್ತೆ. ಇತ್ಯಾದಿಗಳನ್ನು ತನಿಖೆಗೆ ಆಗ್ರಹಿಸಿ ತಪ್ಪಿತಸ್ಥ ಅಧಿಕಾರಿಗಳನ್ನು ಹುದ್ದೆಯಿಂದ ವಜಾಗೊಳಿಸುವಂತೆ ಕೇಳಿಕೊಂಡಾಗ ಅದಕ್ಕೆ ಅಂದು ಯಾರೂ ಧ್ವನಿಗೂಡಿಸಲಿಲ್ಲ ಇಂದು ಮತ್ತೆ ಮತ್ತೆ ನಿರಪರಾಧಿ ಬಡಪಾಯಿಗಳನ್ನು ಬಲಿ ನೀಡುವ ದುರವಸ್ಥೆಯನ್ನು ನಾವು ಕಾಣಬೇಕಾಯಿತು ಎಂದು ಸುಲೈಮಾನ್ ಕಲ್ಲರ್ಪೆ ವಿಷಾದ ವ್ಯಕ್ತಪಡಿಸಿದರು.

 ಸದಾ ತನ್ನ ಆಂತರಿಕ ಸಮಾಸ್ಯೆಗಳಲ್ಲೇ ಮುಳುಗಿರುವ ಈ ಸರಕಾರಕ್ಕೆ ಮತ್ತು ತಮ್ಮ ಪಕ್ಷದ ಸದಸ್ಯರ ಪಕ್ಷಾಂತರವನ್ನೇ ನಿಯಂತ್ರಿಸಲಾಗದ ವಿಪಕ್ಷಗಳಿಗೆ  ಜನರ ಸಮಸ್ಯೆಗಳಿಗೆ ಗಮನಹರಿಸಲು ಸಮಯ ಸಿಗುವುದಾದರೂ ಹೇಗೆ ಎಂದು ಸರಕಾರ ಮತ್ತು ವಿಪಕ್ಷ ಗಳ ಮೌನಕ್ಕೆ ವ್ಯಂಗ್ಯವಾಡಿದರು. ಟಿ. ಆರ್. ಪಿ.ಯ ಹಿಂದೆ ಬಿದ್ದ ಮಾಧ್ಯಮಗಳಲ್ಲೂ ಇಂದು ಈ ದುರಂತಗಳ ಬಗ್ಗೆ ಚರ್ಚಿಸುವ ಸಮಯವಿಲ್ಲವೆಂದಾದರೆ ಇದು ಪ್ರಜಾಪ್ರಭುತ್ವಕ್ಕೆ  ಆಗುತ್ತಿರುವ ಅಪಮಾನವಾಗಿದೆಯೆಂದವರು ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಎಫ್. ಐ. ಟಿ.ಯು. ಕಾರ್ಮಿಕರ ಪರ ಹೋರಾಟದಲ್ಲಿ ಕಟಿಬದ್ಧವಾಗಿದೆಯೆಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News