ಲೋಕಸಭಾ ಮತ್ತು ರಾಜ್ಯಸಭಾ ಟಿವಿ 'ಸಂಸದ್ ಟಿವಿ'ಯಾಗಿ ವಿಲೀನ

Update: 2021-03-02 18:41 GMT

ಹೊಸದಿಲ್ಲಿ,ಮಾ.2: ಭಾರತೀಯ ಸಂಸತ್ತು ತನ್ನ ಲೋಕಸಭಾ ಮತ್ತು ರಾಜ್ಯಸಭಾ ಟಿವಿ ವಾಹಿನಿಗಳನ್ನು ಒಗ್ಗೂಡಿಸಿ ನೂತನ ಸಂಸದ್ ಟವಿಯನ್ನು ಸೃಷ್ಟಿಸಿದೆ. ನೂತನ ವಾಹಿನಿಯು ಸಂಸತ್ ಕಲಾಪಗಳ ನೇರಪ್ರಸಾರವನ್ನು ಮುಂದುವರಿಸಲಿದೆ ಮತ್ತು ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳನ್ನೂ ಪ್ರಸಾರಿಸಲಿದೆ.

 ಮಾಜಿ ಜವಳಿ ಕಾರ್ಯದರ್ಶಿ ರವಿ ಕಪೂರ್ ಅವರನ್ನು ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ನೂತನ ಸಂಸದ್ ಟಿವಿಯ ಸಿಇಒ ಆಗಿ ನೇಮಕಗೊಳಿಸಲಾಗಿದೆ.

2019ರಲ್ಲಿ ಪ್ರಸಾರ ಭಾರತಿ ನೇತೃತ್ವದ ತಜ್ಞರ ಸಮಿತಿಯು ವಿಲೀನ ಯೋಜನೆಯನ್ನು ಪ್ರಸ್ತಾವಿಸಿತ್ತು ಮತ್ತು ಇದು ವೆಚ್ಚಗಳ ಕಡಿತ,ವಾಹಿನಿಯ ಸುವ್ಯವಸ್ಥಿತ ವ್ಯವಸ್ಥಾಪನೆ ಮತ್ತು ವೀಕ್ಷಕರಿಗೆ ಹಾಗೂ ಜಾಹೀರಾತುದಾರಿಗಾಗಿ ಹೆಚ್ಚು ಆಕರ್ಷಕವಾಗಿಸಲು ಕಾರ್ಯಕ್ರಮದ ವಿಷಯಗಳ ಪರಿಷ್ಕರಣೆಯ ಉದ್ದೇಶವನ್ನು ಹೊಂದಿದೆ. ಲೋಕಸಭಾ ಮತ್ತು ರಾಜ್ಯಸಭಾ ವಾಹಿನಿಗಳೆರಡೂ ಲಾಭದಾಯಕವಾಗಿದ್ದು,ಸಾರ್ವಜನಿಕ ಕ್ಷೇತ್ರದ ಉದ್ಯಮಗಳು ಮತ್ತು ಸಚಿವಾಲಯಗಳಿಂದ ಹೆಚ್ಚಿನ ಜಾಹೀರಾತುಗಳನ್ನು ಪಡೆಯುತ್ತಿವೆ.

ನೂತನ ಯೋಜನೆಯಂತೆ ಸಂಸದ್ ಟಿವಿಯು ಸಂಸತ್ತಿನ ಉಭಯ ಸದನಗಳ ಕಲಾಪಗಳ ನೇರ ಪ್ರಸಾರಕ್ಕಾಗಿ ಎರಡು ವೇದಿಕೆಗಳು ಅಥವಾ ವಾಹಿನಿಗಳನ್ನು ಹೊಂದಿರಲಿದೆ. ಕಲಾಪಗಳಿಲ್ಲದಿದ್ದಾಗ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಚಲಿತ ವಿದ್ಯಮಾನಗಳನ್ನು ಪ್ರಸಾರ ಮಾಡಲಿದೆ,ಒಂದು ವಾಹಿನಿಯನ್ನು ಸ್ಥಗಿತಗೊಳಿಸಿ ಇನ್ನೊಂದನ್ನು ನಡೆಸುವ ಪರ್ಯಾಯ ಆಯ್ಕೆಯೂ ಇರಲಿದೆ.

ರಾಜ್ಯಸಭಾ ಟಿವಿ ವಾಹಿನಿಯು ತಾಲಕಟೋರಾ ಸ್ಟೇಡಿಯಮ್ ಬಳಿಯ ಕಟ್ಟಡವೊಂರಲ್ಲಿ ತನ್ನ ಕಚೇರಿ ಮತ್ತು ಸ್ಟುಡಿಯೊ ಹೊಂದಿದ್ದು,ಇದಕ್ಕಾಗಿ ವಾರ್ಷಿಕ 10ರಿಂದ 12 ಕೋ.ರೂ.ಬಾಡಿಗೆಯನ್ನು ಪಾವತಿಸುತ್ತಿದೆ. ವಿಲೀನ ಯೋಜನೆಯು ಖರ್ಚುಗಳಲ್ಲಿ ಭಾರೀ ಮಿತವ್ಯಯವನ್ನು ಸಾಧಿಸಲು ನೆರವಾಗಲಿದೆ ಎಂದು ರಾಜ್ಯಸಭೆಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು. ಸಂಸದ್ ಟಿವಿಯು ಮಹಾದೇವ ರೋಡ್‌ನ ಪುಟ್ಟ ಬಂಗಲೆಯೊಂದರಿಂದ ಕಾರ್ಯಾಚರಿಸಲಿದೆ. ಲೋಕಸಭಾ ಟಿವಿಯು ಸಂಸತ್ತಿನ ಲೈಬ್ರರಿ ಕಟ್ಟಡದಲ್ಲಿ ಸ್ಟುಡಿಯೊ ಮತ್ತು ಸಂಸತ್ ಭವನದ ಮೊದಲ ಅಂತಸ್ತಿನಲ್ಲಿ ಮಾಹಿತಿ ಕೇಂದ್ರವನ್ನು ಹೊಂದಿದೆ. ಈ ಹಾಲಿ ಮೂಲಸೌಕರ್ಯಗಳು ಸಂಸದ್ ಟಿವಿಯನ್ನು ನಡೆಸಲು ಸಾಕಾಗುತ್ತವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News