ಶ್ರೀನಿವಾಸ್ ಕಾಲೇಜಿನಲ್ಲಿ 'ಕಲಾನ್ವೇಷಣ' ಪ್ರತಿಭಾ ಕಾರ್ಯಕ್ರಮ

Update: 2021-03-02 07:31 GMT

ಮಂಗಳೂರು : ಮುಕ್ಕದಲ್ಲಿರುವ ಶ್ರೀನಿವಾಸ್ ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ "ಕಲಾನ್ವೇಷಣ" ಪ್ರತಿಭಾ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊಸಬೆಟ್ಟುವಿನ ಅಕ್ಷರ ಕೋಚಿಂಗ್ ಕೇಂದ್ರದ ಪ್ರಾಂಶುಪಾಲರಾದ ಪ್ರೊ. ಪ್ರಥ್ವಿರಾಜ್  ಉದ್ಘಾಟಿಸಿದರು.  ಕಾಲೇಜಿನ ಪ್ರಾಂಶುಪಾಲರಾದ ಡಾ. ಥಾಮಸ್ ಪಿಂಟೋ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿನಿ ಶ್ರೀನಿಧಿ ಪ್ರಾರ್ಥನೆ ಮಾಡಿದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ ಎಂ ಸ್ವಾಗತ ಭಾಷಣವನ್ನು ಮಾಡಿದರು. ಕಾರ್ಯಕ್ರಮದ ಸಂಯೋಜಕರು ಹಾಗೂ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು ಹಾಗೂ ಕಲಾನ್ವೇಷಣ ಕಾರ್ಯಕ್ರಮದ ಕಿರು ಪರಿಚಯ ನೀಡಿದರು. ಡಾ. ಶುಭ್ರ ಜ್ಯೋತ್ಸ್ನಾ ಐತಾಳ್  ಮುಖ್ಯ ಅತಿಥಿ ಪ್ರೊ. ಪ್ರಥ್ವಿರಾಜ್ ಅವರನ್ನು ಸಭೆಗೆ ಪರಿಚಯಿಸಿದರು.

ಉದ್ಘಾಟನಾ ಭಾಷಣ ಮಾಡಿದ ಪ್ರೊ. ಪ್ರಥ್ವಿರಾಜ್ ರವರು ಮಾತನಾಡಿ, ಇಂದಿನ ಕಾರ್ಯಕ್ರಮವು ತನ್ನ ವಿದ್ಯಾರ್ಥಿ ಜೀವನದ ಸುಂದರ ಕ್ಷಣಗಳನ್ನು ಮರುಕಳಿಸಿದೆ ಎಂದು ಹೇಳಿದರು. ಶಿಕ್ಷಕರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಸ್ಪೂರ್ತಿಯನ್ನು ನೀಡುತ್ತಾರೆ. ವಿವಿಧ ಇಂಜಿನಿಯರಿಂಗ್ ಪದವಿಗಳಿಗೆ ಪ್ರವೇಶ ಪಡೆದುಕೊಂಡಿರುವ ನೀವು, ಸತತ ಪರಿಶ್ರಮ, ಏಕಾಗ್ರತೆ ಹಾಗೂ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಮುಂದುವರಿದು, ಗುರಿಯನ್ನು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಡಾ. ಥಾಮಸ್ ಪಿಂಟೋ ಮಾತನಾಡಿ, ಬೇರೆಯವರ ಹೆಜ್ಜೆ ಗುರುತಿನಲ್ಲಿ ನಡೆಯುವುದು ಸಾಮಾನ್ಯ, ಬೇರೆಯವರು ನಿಮ್ಮ ಹೆಜ್ಜೆ‌ ಗುರುತಿನಲ್ಲಿ ನಡೆಯುವಂತೆ ಆಗಬೇಕು. ಇಂದಿನ ಯುವಕರು ಸಮಾಜಕ್ಕೆ ರೋಲ್ ಮೋಡೆಲ್ (ಆದರ್ಶಪ್ರಾಯ) ರಾಗಬೇಕು. ಉತ್ತಮ ವೃತ್ತಿಪರರಾಗುವುದರ ಜೊತೆಗೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕು. ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ಶ್ರೀ ಸಿದ್ಧಯ್ಯ ಪುರಾಣಿಕರು ಹೇಳಿದಂತೆ, ಮೊದಲು ಮಾನವನಾಗು ಎಂದು ಹೇಳಿದರು. ಯುವಕರು ಹಣದ ದಾಸನಾಗುವುದಕ್ಕಿಂತ ಜ್ಞಾನದ ದಾಸನಾಗಿ, ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ, ಸ್ರಜನಶೀಲರಾಗಬೇಕು ಎಂದು ಹೇಳಿದರು.

ಪ್ರೊ. ಓಂಪ್ರಕಾಶ್ ಭಟ್ ವಂದಿಸಿದರು. ಪ್ರೊ. ಅಮೃತ್ ಸಿ ಹಿರೇಮಠ್ ಕಾರ್ಯಕ್ರಮವನ್ನು ನಿರೂಪಿಸಿದರು. ವಿವಿಧ ಇಂಜಿನಿಯರಿಂಗ್ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News