ಮಂಗಳೂರು : ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

Update: 2021-03-02 08:08 GMT

ಮಂಗಳೂರು : ಬೆಲೆ ಏರಿಕೆ ವಿರುದ್ಧ ಸಮಾಜದ ಎಲ್ಲಾ ವರ್ಗಗಳ ಜನ ಹೋರಾಟ ನಡೆಸಬೇಕಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಅವರು ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಗ್ರಹ ಬಳಕೆಯ ವಸ್ತುಗಳ ಬೆಲೆ ಏರಿಕೆ ವಿರುದ್ಧ  ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಮಂಗಳೂರಿನ ಕ್ಲಾಕ್ ಟವರ್ ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ  ಕಾಲ್ನಡಿಗೆ ಜಾಥಾ ಬಳಿಕ ನಡೆದ ಸಭೆಯನ್ನು ದ್ದೇಶಿಸಿ ಮಾತನಾಡುತ್ತಿದ್ದರು.

70 ವರ್ಷ ಗಳಿಂದ ದೇಶದ ಆಡಳಿತ ಮಾಡಿದ ಕಾಂಗ್ರೆಸ್ ಯಾವತ್ತೂ ಬಡವರನ್ನು, ರೈತರನ್ನು, ಕಾರ್ಮಿಕರನ್ನು, ಮಹಿಳೆಯರನ್ನು, ಮಕ್ಕಳನ್ನು ನಿರ್ಲಕ್ಷ್ಯ ಮಾಡಿರಲಿಲ್ಲ. ಶೋಷಿತರ ಪರವಾಗಿ, ಬಡವರ ಪರವಾಗಿ, ಹಸಿದವರ ಪರವಾಗಿತ್ತು. ಆದರೆ ಬಿಜೆಪಿ ಸರಕಾರ ಬಡವರನ್ನು ರೈತರನ್ನು ಬೀದಿಗಿಳಿಸಿ ವಿಘ್ನ ಸಂತೋಷವನ್ನು ಕಾಣುತ್ತಿದೆ. ಮೋದಿ, ಅಮಿತ್ ಶಾ ವಿಘ್ನ ಸಂತೋಷಿಗಳಾಗಿದ್ದರೆ. ದೇಶದಲ್ಲಿ ಬಡವರ ಬಗ್ಗೆ ಕನಿಕರ ಇಲ್ಲದ ನಿರ್ಜೀವ ಸರಕಾರ ಇದನ್ನು ಕಿತ್ತೋಗೆಯುವುದು ಅನಿವಾರ್ಯ ಎಂದು ರಮಾನಾಥ ರೈ ಹೇಳಿದರು.

ಕೇಂದ್ರ ಸರಕಾರ ಬೆಲೆ ಏರಿಕೆ ಮೂಲಕ ಜನರ ಕಣ್ಣೀರಿಗೆ ಕಾರಣವಾಗಿದೆ. ಸರಕಾರದ ಉದ್ಯಮಗಳನ್ನು ಖಾಸಗೀಕರಣ ಗೊಳಿಸಿ ದೇಶ ತಲೆ ತಗ್ಗಿಸುವಂತೆ ಮಾಡಿದೆ. ಬಿಜೆಪಿಯ ಕೋಮುವಾದಿ ನೀತಿ, ಬೆಲೆ ಏರಿಕೆಯ ವಿರುದ್ಧ  ವ್ಯಾಪಕ ಪ್ರತಿಭಟನೆ ಅನಿವಾರ್ಯ ವಾಗಿದೆ. ರಾಜ್ಯ ಸರಕಾರವೂ ಜನರ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸದೆ  ಕೇಂದ್ರದ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.

ಪ್ರತಿಭಟನಾ ಜಾಥದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿ, ಏಳು ವರ್ಷಗಳ ಬಿಜೆಪಿ ನೇತೃತ್ವದ ಎನ್ ಡಿ ಎ ಸರಕಾರ ಜನರನ್ನು ಬೆಲೆ ಏರಿಕೆಯಿಂದ ತತ್ತರಿಸುವಂತೆ ಮಾಡಿದೆ ಎಂದರು.

ಪ್ರತಿಭಟನಾ ಸಭೆಯಲ್ಲಿ ಮಾಜಿ ಸಂಸದ ಬಿ.ಇಬ್ರಾಹಿಂ, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಶಕುಂತಳಾ ಶೆಟ್ಟಿ, ಮೊಯ್ದಿನ್ ಬಾವ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಲೆಟ್ ಪಿಂಟೋ, ದ.ಕ.ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ , ವಿದ್ಯಾರ್ಥಿ ಘಟಕದ ಅಧ್ಯಕ್ಷ ಸವಾದ್ , ವಿವಿಧ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಜಿ.ಪಂ, ಮನಪಾ ಸದಸ್ಯರು, ತಾ.ಪಂ., ಗ್ರಾ.ಪಂ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

ಎತ್ತಿನ ಗಾಡಿ, ಗ್ಯಾಸ್ ಸಿಲಿಂಡರ್ ನೊಂದಿಗೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು  ಬೆಲೆ ಏರಿಕೆಗೆ ವಿರೋಧ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News