ಕಾಜೂರು ಉರೂಸ್ ಸಮಾರೋಪ

Update: 2021-03-02 11:04 GMT

ಬೆಳ್ತಂಗಡಿ : ತಾಲೂಕಿನ ಇತಿಹಾಸ ಪ್ರಸಿದ್ಧ ಸರ್ವಧರ್ಮೀಯರ ಸೌಹಾರ್ದ ಕ್ಷೇತ್ರ, ಕಾಜೂರು ಉರೂಸ್ ಮಹಾಸಂಭ್ರಮಕ್ಕೆ ರವಿವಾರ ರಾತ್ರಿ ತೆರೆಬಿದ್ದಿದೆ.

ಉರೂಸ್ ಸಮಾರೋಪ ಸಮಾರಂಭಕ್ಕೆ ಮತ್ತು ಕಳೆದ 10 ದಿನಗಳಿಂದ ಕ್ಷೇತ್ರಕ್ಕೆ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ ರಾಜ್ಯಗಳಿಂದಲೂ ಸೇರಿ‌ ನಾಡಿನ ಅನೇಕ ಕಡೆಗಳಿಂದ ಲಕ್ಷಾಂತರ ಮಂದಿ ಆಗಮಿಸಿ‌ ಭಾಗಿಯಾಗಿದ್ದಾರೆ. ಉರೂಸ್ ಸಮಾರೋಪದಂಗವಾಗಿ ರವಿವಾರ ರಾತ್ರಿ ಪ್ರಾರಂಭವಾದ ಅನ್ನದಾನ ಸೋಮವಾರ ಸಂಜೆಯವರೆಗೂ ನಡೆದಿದ್ದು‌ ಇದರಲ್ಲಿ ಲಕ್ಷದಷ್ಟು ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದಾರೆ.

ಉರೂಸ್ ಸಮಾರೋಪದ ಅಧ್ಯಕ್ಷತೆಯನ್ನು ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯ ಸಯ್ಯಿದ್ ಕಾಜೂರು ತಂಙಳ್ ವಹಿಸಿದ್ದರು.
ಮೌಲೀದ್ ಮತ್ತು ದುಆ ಪ್ರಾರ್ಥನೆಗೆ ಸಯ್ಯಿದ್ ಉಪ್ಪಳ್ಳಿ‌ ತಂಙಳ್ ಚಿಕ್ಕಮಗಳೂರು ಮತ್ತು ಅಲ್ ಖಾದಿಸ ಎಜುಕೇಶನ್ ಅಕಾಡಮಿ ಚೇರ್ಮನ್ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ನೇತೃತ್ವ ನೀಡಿದರು.

ವೇದಿಕೆಯಲ್ಲಿ ಸಯ್ಯಿದ್ ಸಿಟಿಎಂ ಸಲಿಂ ತಂಙಳ್ ಸಹಿತ ಪ್ರಮುಖ ಗಣ್ಯರು ಭಾಗಿಯಾಗಿದ್ದರು. ಕೇರಳದ ಪ್ರಖ್ಯಾತ ವಾಗ್ಮಿ ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲರ ಮಲಪ್ಪುರಂ ಧಾರ್ಮಿಕ ಉಪನ್ಯಾಸ ನಡೆಸಿಕೊಟ್ಟರು. ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಸ್ವಾಗತಿಸಿ, ಹತ್ತು ದಿನಗಳ ಸಂಭ್ರಮದ ಯಶಸ್ಸಿಗೆ ಕಾರಣರಾದ ಸರ್ವರನ್ನು ನೆನೆದರು. 

ಉರೂಸ್ ಸಮಿತಿ ಉಪಾಧ್ಯಕ್ಷ ಕೆ.ಮುಹಮ್ಮದ್ ಕಿಲ್ಲೂರು, ಜೊತೆ ಕಾರ್ಯದರ್ಶಿ ಎಂ.ಎ ಕಾಸಿಂ ಮಲ್ಲಿಗೆಮನೆ, ಕೋಶಾಧಿಕಾರಿ ಕೆ.ಎಮ್‌ ಕಮಾಲ್ ಕಾಜೂರು ಉಪಸ್ಥಿತರಿದ್ದರು. ಕಾಜೂರು‌-ಕಿಲ್ಲೂರು ಜಂಟಿ‌ ಜಮಾಅತ್ ನ‌ ಉರೂಸ್ ಸಮಿತಿ ಸದಸ್ಯರುಗಳು, ಕಾಜೂರು ಸರ್ವ ಮೊಹಲ್ಲಾಗಳವರು ಉರೂಸ್  ಕಾರ್ಯಕ್ರಮವನ್ನು ಮಾದರಿಯಾಗಿ ರೂಪಿಸಿಕೊಟ್ಟರು.

ರಶೀದ್ ಮದನಿ ನಿರೂಪಿಸಿ, ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕರ್ ಸಿದ್ದೀಕ್ ಕಾಜೂರು ವಂದಿಸಿದರು. ಸುಮಾರು 800 ರಷ್ಟು ಸ್ವಯಂ ಸೇವಕರು ಶಿಸ್ತುಬದ್ಧವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿದರು. ಆಗಮಿಸಿದ ಸರ್ವರಿಗೂ ಅನ್ನದಾನ, ತಂಪು ಪಾನೀಯ ವಿತರಣೆ ನಡೆಯಿತು. 10 ದಿನಗಳಲ್ಲಿ ಪ್ರಖ್ಯಾತ ವಾಗ್ಮಿಗಳಿಂದ ಧಾರ್ಮಿಕ ಉಪನ್ಯಾಸ ನಡೆಯಿತು.

ರಹ್ಮಾನಿಯಾ ದಫ್ ಸಮಿತಿ ಕಾಜೂರು ಇವರಿಂದ ಇಸ್ಮಾಯಿಲ್ ಮುಸ್ಲಿಯಾರ್ ನೇತೃತ್ವದಲ್ಲಿ ಇಸ್ಲಾಂ ಸಾಂಪ್ರದಾಯಿಕ ದಪ್ಫ್ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News