ಚುನಾವಣೆ ಹಿನ್ನೆಲೆ: ಪಾಲಿಕೆ ಪ್ರವೇಶಕ್ಕೆ ಸಾರ್ವಜನಿಕರ ನಿರ್ಬಂಧಕ್ಕೆ ಆಕ್ಷೇಪ
ಮಂಗಳೂರು, ಮಾ. 2: ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಇಂದು ಮೇಯರ್, ಉಪ ಮೇಯರ್ ಚುನಾವಣೆಯ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯ ಬಳಿಕ ಪಾಲಿಕೆ ಪ್ರವೇಶಕ್ಕೆ ನಿರ್ಬಂಧಿಸಿ ಪೊಲೀಸ್ ಪಹರೆ ನೀಡಲಾಗಿತ್ತು.
ಮಾಧ್ಯಮದವರಿಗೂ ಒಳ ಪ್ರವೇಶಿಸಲು ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಯಾವುದೇ ಪೂರ್ವ ಮಾಹಿತಿಯನ್ನು ನೀಡದೆ ದೂರದ ಊರುಗಳಿಂದ ಹಲವಾರು ರೀತಿಯ ಕಚೇರಿ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ಮನಪಾ ಕಚೇರಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದನ್ನು ಸಾಮಾಜಿಕ ಹೋರಾಟಗಾರ ಶಿಧರ ಶೆಟ್ಟಿ ಆಕ್ಷೇಪಿಸಿದರು.
ಪ್ರವೇಶ ದ್ವಾರದ ಎದುರಿನಲ್ಲಿ ಸಾರ್ವಜನಿಕರಿಗೆ ನಿಷೇಧ ಎಂಬ ಬೋರ್ಡ್ ಹಾಕಲಾಗಿದ್ದರ ಬಗ್ಗೆ ಅಲ್ಲಿದ್ದ ಪೊಲೀಸ್ ಸಿಬ್ಬಂದಿಗಳನ್ನು ಪ್ರಶ್ನಿಸಿದರಲ್ಲದೆ, ಆಯುಕ್ತರ ಸಹಾಯಕರಿಗೆ ಕರೆ ಮಾಡಿ ನಿರ್ಬಂಧ ಹೇರಿರುವ ಬಗ್ಗೆ ಪ್ರಶ್ನಿಸಿದರು. ಸಾರ್ವಜನಿಕರಿಗೆ ಪ್ರವೇಶ ತಡೆಯಲು ಮನಪಾ ಆಡಳಿತದಿಂದ ಯಾವುದೇ ಸೂಚನೆ ನೀಡಲಾಗಿಲ್ಲ ಎಂಬ ಉತ್ತರ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಬಳಿಕ ಒಳ ಹೋಗುವವರಿಗೆ ಅವಕಾಶ ನೀಡಿದರು.