ಉಡುಪಿ: ಪ್ರವಾಸ ಬಂದಿದ್ದ ಚಿತ್ರದುರ್ಗದ ವ್ಯಕ್ತಿ ಮೃತ್ಯು
Update: 2021-03-02 20:47 IST
ಹಿರಿಯಡ್ಕ, ಮಾ.2: ಉಡುಪಿಗೆ ಪ್ರವಾಸ ಬಂದಿದ್ದ ಚಿತ್ರದುರ್ಗ ಜಿಲ್ಲೆಯ ವ್ಯಕ್ತಿಯೊಬ್ಬರು ಹಿರಿಯಡ್ಕ ಸಮೀಪ ವಾಹನದಲ್ಲಿಯೇ ಮೃತಪಟ್ಟ ಘಟನೆ ಮಾ.1 ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಚಿತ್ರದುರ್ಗ ಆಲಗಟ್ಟಿ ನಿವಾಸಿ ಚೆನ್ನಬಸಪ್ಪ ಎಂಬವರ ಮಗ ಟಿ.ಸಿ.ಶಿವಕುಮಾರ್ (39) ಎಂದು ಗುರುತಿಸಲಾಗಿದೆ. ಇವರು ಫೆ.28ರಂದು ರಾತ್ರಿ ಸಂಬಂಧಿಕರೊಂದಿಗೆ ವಾಹನದಲ್ಲಿ ಸಿಂಗದೂರು, ಧರ್ಮಸ್ಥಳ, ಉಡುಪಿ ಕಡೆಗೆ ಪ್ರವಾಸ ಹೊರಟಿದ್ದರು. ಪ್ರವಾಸದುದಕ್ಕೂ ಮದ್ಯ ಸೇವಿಸುತ್ತಿದ್ದ ಶಿವ ಕುಮಾರ್ ಸರಿಯಾಗಿ ಊಟ ಮಾಡುತ್ತಿರಲಿಲ್ಲ ಎನ್ನಲಾಗಿದೆ.
ಹಿರಿಯಡ್ಕ ಬಳಿ ಪೆಟ್ರೋಲ್ ಬಂಕ್ ಬಳಿ ಎಲ್ಲರು ತಿಂಡಿ ತಿನ್ನಲು ವಾಹನ ದಿಂದ ಇಳಿದಿದ್ದು, ಶಿವಕುಮಾರ್ ಒಬ್ಬನೇ ವಾಹನದಲ್ಲಿ ಮಲಗಿದ್ದನು. ಈ ವೇಳೆ ಅವರು ಅಸ್ವಸ್ಥಗೊಂಡು ಸೀಟಿನಿಂದ ಬಿದ್ದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.