×
Ad

ಸ್ಕ್ಯಾನಿಂಗ್ ಮಾಡುವಾಗ ಸರಕಾರದ ನಿಯಮಗಳನ್ನು ಪಾಲಿಸಬೇಕು: ಡಿಎಚ್‌ಒ

Update: 2021-03-02 21:26 IST

ಮಂಗಳೂರು, ಮಾ. 2: ವೈದ್ಯಕೀಯ ಸಂಸ್ಥೆಗಳಲ್ಲಿ ಸ್ಕ್ಯಾನಿಂಗ್ ಮಾಡುವಾಗ ಸರಕಾರದ ಮಾರ್ಗಸೂಚಿ ಹಾಗೂ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು. ತಪ್ಪಿದ್ದಲ್ಲಿ ಅಂತಹ ಸ್ಕ್ಯಾನಿಂಗ್ ಸೆಂಟರ್‌ಗಳ ಪರವಾನಿಗೆ ರದ್ದು ಪಡಿಸಲಾಗುವುದು ಎಂದು ದ.ಕ. ಜಿಲ್ಲಾ ಆರೋಗ್ಯಾಧಿ ಕಾರಿ ಡಾ. ರಾಮಚಂದ್ರ ಬಾಯಾರಿ ಎಚ್ಚರಿಸಿದ್ದಾರೆ.

ಗರ್ಭಪೂರ್ವ ಮತ್ತು ಜನನ ಪೂರ್ವ ಲಿಂಗ ನಿರ್ಣಯ ತಡೆ ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧವಾಗಿದೆ. ಅಂತಹ ಪತ್ತೆ ಪ್ರಕರಣಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳ ಲಾಗುವುದು ಎಂದ ಅವರು ಸ್ಕ್ಯಾನಿಂಗ್ ಸೆಂಟರ್‌ಗಳ ಪರವಾನಿಗೆ ಪಡೆಯುವ ಸಂದರ್ಭ ಸೂಚಿಸಿರುವ ರೇಡಿಯೋಲಾಜಿಸ್ಟ್ ಕಾರ್ಯ ನಿರ್ವಹಿಸಬೇಕು. ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನಿಂದ ಅಧೀಕೃತ ಪ್ರಮಾಣ ಪತ್ರವನ್ನು ರೇಡಿಯೋಲಾಜಿಸ್ಟ್ ಕಡ್ಡಾಯವಾಗಿ ಪಡೆದರಬೇಕು ಎಂದು ಸೂಚಿಸಿದರು.

ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸ್ಕ್ಯಾನಿಂಗ್ ಮಾಡುವಾಗ ನಿಯಮಾನುಸಾರ ದಾಖಲೆಗಳನ್ನಿಟ್ಟು ಅವುಗಳಲ್ಲಿ ಸ್ಕ್ಯಾನಿಂಗ್‌ನ ದೈನಂದಿನ ಕಾರ್ಯಗಳ ಬಗ್ಗೆ ನೋಂದಣಿ ಮಾಡಬೇಕು. ಭ್ರೂಣಲಿಂಗ ಪತ್ತೆ ಹಚ್ಚುವುದು ಅಪರಾಧ ಹಾಗೂ ಅದರ ಶಿಕ್ಷೆಯ ಬಗ್ಗೆ ಸೂಚಿಸುವ ಫಲಕಗಳನ್ನು ಅಳವಡಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ರಾಜೇಶ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ವತ್ಸಲಾ ಕಾಮತ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೀಪಾ ಪ್ರಭು, ಯೆನೆಪೊಯ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ. ರವಿಚಂದ್ರ, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಶೈಲಜಾ, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ರೇಡಿಯಾಲಜಿಸ್ಟ್ ಅನಿತ್‌ರಾಜ್ ಭಟ್, ಶಾಂತಿ ಸಂದೇಶ ಟ್ರಸ್ಟ್‌ನ ನಿರ್ದೇಶಕಿ ಸಿಸ್ಟರ್ ದುಲ್ಸಿನಾ ಕ್ರಾಸ್ತ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News