×
Ad

‘ಆತ್ಮ ನಿರ್ಭರ್ ಭಾರತಕ್ಕೆ ಮಾಹೆ ವಿದ್ಯಾರ್ಥಿಗಳು ಮಾದರಿ’

Update: 2021-03-02 21:35 IST

ಮಣಿಪಾಲ, ಮಾ.2: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಮಧುಕರ ಭಾಗ್ವತ್ ಅವರು ಸೋಮವಾರ ಮತ್ತು ಮಂಗಳವಾರ ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ಗೆ ಭೇಟಿ ನೀಡಿದ್ದು, ವಿವಿಧ ವಿಭಾಗಗಳನ್ನು ಸಂದರ್ಶಿಸಿ ಆಡಳಿತ ಮಂಡಳಿ ಹಾಗೂ ಪ್ರಾದ್ಯಾಪಕ ವೃಂದದೊಂದಿಗೆ ಸಂವಾದ ನಡೆಸಿದರು.

ಮಣಿಪಾಲಕ್ಕೆ ಆಗಮಿಸಿದ ಮೋಹನ್ ಭಾಗ್ವತ್ ಅವರನ್ನು ಮಾಹೆಯ ಅಧ್ಯಕ್ಷ ಹಾಗೂ ಬೆಂಗಳೂರಿನ ಮಣಿಪಾಲ ಶಿಕ್ಷಣ ಹಾಗೂ ವೈದ್ಯಕೀಯ ಗುಂಪಿನ ಅಧ್ಯಕ್ಷ ರಾದ ಡಾ.ರಂಜನ್ ಎಂ.ಪೈ ಸ್ವಾಗತಿಸಿದರು. ಬಳಿಕ ಭಾಗ್ವತ್ ಅವರು ಮಾಹೆಯ ಆಡಳಿತ ಕಚೇರಿ ಇರುವ ಮಣಿಪಾಲ ಎಜ್ಯು ಬಿಲ್ಡಿಂಗ್‌ಗೆ ಆಗಮಿಸಿದರು.

ಸೋಮವಾರ ಅಪರಾಹ್ನ ಅವರು ಆಡಳಿತ ಮಂಡಳಿಯ ಉನ್ನತ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಮಾಹೆಯ ಕುಲಪತಿ ಲೆ.ಜ. ಡಾ. ಎಂ.ಡಿ.ವೆಂಕಟೇಶ್ ಅವರು ಮಾಹೆ ನಡೆದುಬಂದ ದಾರಿಯ ಪಕ್ಷಿನೋಟವನ್ನು ನೀಡಿದರಲ್ಲದೇ, ಸಂಸ್ಥೆಯ ಭವಿಷ್ಯದ ಯೋಜನೆಗಳನ್ನು ವಿವರಿಸಿದರು. ಬಳಿಕ ಅವರು ಅದೇ ಕಟ್ಟಡದಲ್ಲಿರುವ ಮಣಿಪಾಲದ ಸಮಗ್ರ ಚಿತ್ರಣವನ್ನು ನೀಡುವ ಸಾಕ್ಷಚಿತ್ರವನ್ನು ವೀಕ್ಷಿಸಿದರು.

ಮಾಹೆಯ ಪ್ರಾದ್ಯಾಪಕ ವೃಂದದೊಂದಿಗೂ ಮೋಹನ್ ಭಾಗ್ವತ್ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಭಾಗ್ವತ್ ಅವರು ದೇಶದ ಉನ್ನತ ಶಿಕ್ಷಣ, ಆರೋಗ್ಯ, ಸಂಶೋಧನೆ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಮಾಹೆ ನೀಡುತ್ತಿರುವ ಅಗಾಧ ಕೊಡುಗೆಯನ್ನು ಶ್ಲಾಘಿಸಿದರು.
‘ಮೇಕ್ ಇಂಡಿಯಾ ಆತ್ಮ ನಿರ್ಭರ್ ಭಾರತಕ್ಕೆ ಅಗತ್ಯವಾದ ಆತ್ಮವಿಶ್ವಾಸ, ಜನರ ಸೇವೆಗೆ ಸಂಕಲ್ಪ, ಹಿರಿಯರಿಗೆ ಗೌರವ ನೀಡುವುದನ್ನು ಮಾಹೆಯ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ. ಮಾಹೆ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಜೀವನಕ್ಕೆ ಅಗತ್ಯವಾದ, ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸುವ ಮೂಲಭೂತ ಅಗತ್ಯತೆಗಳೆಲ್ಲವೂ ಮಾಹೆಯಲ್ಲಿವೆ.’ ಎಂದು ಶ್ಲಾಘಿಸಿದರು.

ಮಾಹೆ ಕ್ಯಾಂಪಸ್‌ನಲ್ಲಿ ಇವೆಲ್ಲವೂ ಅನುಷ್ಠಾನಗೊಂಡಿದ್ದು, ಕಾರ್ಯರೂಪಕ್ಕೆ ಬಂದಿದೆ. ಈ ಮೂಲಕ ಮಾಹೆ, ವಿದ್ಯಾರ್ಥಿಗಳಿಗೆ ಬಲಿಷ್ಟ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಉಳಿದೆಲ್ಲ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮೋಹನ ಭಾಗ್ವತ್ ನುಡಿದರು.

ಮೋಹನ್ ಭಾಗ್ವತ್ ಅವರು ಇಂದು ಮಣಿಪಾಲ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಅತ್ಯಂತ ಜನಪ್ರಿಯ ಅನಾಟಮಿ ಮತ್ತು ಫೆಥಾಲಜಿ ಮ್ಯೂಸಿಯಂ (ಎಂಎಪಿ)ಗೆ ಭೇಟಿ ನೀಡಿ ಎಂಎಪಿಯ ಡಿಜಲೀಕರಣ ಪ್ರಕ್ರಿಯೆಗೆ ಚಾಲನೆ ನೀಡಿದರು. ಅಲ್ಲದೇ ಅವರು ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎಂಐಸಿ) ಹಾಗೂ ಐಟಿ ವಿಭಾಗಕ್ಕೂ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News