ನಕ್ಸಲರಿಗೆ ನೆರವು ಆರೋಪ : ವೇಣೂರು ಎಸ್ಸೈಯ ಹೇಳಿಕೆ ದಾಖಲು
ಮಂಗಳೂರು, ಮಾ. 2:ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದ ವಿಠಲ ಮಲೆಕುಡಿಯ ಅವರ ವಿರುದ್ಧ ನಕ್ಸಲರಿಗೆ ನೆರವಾದ ಆರೋಪ ಹೊರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವೇಣೂರು ಎಸ್ಸೈ ಉಮೇಶ್ ಉಪ್ಪಳಿಗೆ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದರು.
ಪ್ರಕರಣದ ದೋಷಾರೋಪಣ ಪಟ್ಟಿ ಸಲ್ಲಿಸಿದ ಪುತ್ತೂರಿನ ಅಂದಿನ ಎಎಸ್ಪಿಅನುಚೇತನ್ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಭಾಸ್ಕರ್ ರೈ ಹಾಗೂ ಎಸ್ಸೈ ಉಮೇಶ್ ಉಪ್ಪಳಿಗೆ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡಲು ಸೂಚಿಸಲಾಗಿತ್ತು. ಆದರೆ, ಅನುಚೇತನ್ ಮತ್ತು ಭಾಸ್ಕರ ರೈ ಹಾಜರಾಗಿಲ್ಲ. ವೇಣೂರು ಎಸ್ಸೈ ಉಮೇಶ್ ಉಪ್ಪಳಿಗೆ ಅವರ ಹೇಳಿಕೆ ದಾಖಲಿಸಲಾಗಿದೆ.
2012ರ ಮಾರ್ಚ್ 3ರಂದು ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 44 ಸಾಕ್ಷಿಗಳ ವಿಚಾರಣೆ ನಡೆದಿತ್ತು. ಇದೀಗ ಪ್ರಕರಣದ ಮುಂದುವರಿದ ಭಾಗವಾಗಿ ಮಾ.23ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ ಎಂದು ನ್ಯಾಯವಾದಿ ದಿನೇಶ್ ಉಳ್ಳೆಪ್ಪಾಡಿ ತಿಳಿಸಿದ್ದಾರೆ.