×
Ad

ತಾಲೂಕು ಮಟ್ಟದಲ್ಲಿ ಗ್ರಾಮವಾಸ್ತವ್ಯ ಮಾದರಿ ಕಾರ್ಯ: ಜಿಲ್ಲಾಧಿಕಾರಿ ಡಾ. ರಾಜೇಂದ್ರ

Update: 2021-03-02 22:15 IST

ಮಂಗಳೂರು, ಮಾ. 2: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ಈಗಾಗಲೇ ಗುರುತಿಸ ಲಾಗಿರುವ ನಿವೇಶನಗಳ ಹಂಚಿಕೆ ಹಾಗೂ ಸರಕಾರಿ ಜಾಗದಲ್ಲಿನ ಅತಿಕ್ರಮಣ ತೆರವು ಕಾರ್ಯವನ್ನು ಗ್ರಾಮ ವಾಸ್ತವ್ಯ ಮಾದರಿಯಲ್ಲಿ ಎಪ್ರಿಲ್ ಅಂತ್ಯದೊಳಗೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಇಂದು ನಡೆದ ದ.ಕ. ಜಿಲ್ಲಾ ಪಂಚಾಯತ್‌ನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ, ನಿವೇಶನ ಒದಗಿಸುವಲ್ಲಿ ವಿಳಂಬವಾಗಿರುವ ಕುರಿತಂತೆ ಅಸಮಾಧಾನ ವ್ಯಕ್ತವಾದ ಸಂದರ್ಭ ಅವರು ಈ ಪ್ರತಿಕ್ರಿಯೆ ನೀಡಿದರು.

94ಸಿ ಮತುತಿ 94ಸಿಸಿ ಅಡಿಯಲ್ಲಿ ಸರ್ಕಾರಿ ನಿವೇಶನ ಕೋರಿ ಅರ್ಜಿ ಸಲ್ಲಿಕೆ ಅವಧಿ ಮುಕ್ತಾಯಗೊಂಡಿದೆ. ನನ್ನ ಕ್ಷೇತ್ರದಲ್ಲಿ 8 ಸಾವಿರ ನಿವೇಶನ ರಹಿತರು ಅರ್ಜಿ ಸಲ್ಲಿಸಿದ್ದಾರೆ. ಅದಾಗ್ಯೂ ಕಳೆದ ಏಳು ವರ್ಷಗಳಿಂದ ಒಂದು ನಿವೇಶನ ಕೂಡ ನೀಡಲು ಸಾಧ್ಯವಾಗಿಲ್ಲ. ಇಂತಹ ವ್ಯವಸ್ಥೆಯಾ ದರೆ ಸರಕಾರದ ಬಗ್ಗೆ ಜನ ಏಳು ತಿಳಿಯುತ್ತಾರೆ ಎಂದು ಶಾಸಕ ಸಂಜೀವ ಮಠಂದೂರು ಬೇಸರಿಸಿದರು.

ಉಳ್ಳವರು ಸರಕಾರಿ ಭೂಮಿಯನ್ನು ಅತಿಕ್ರಮಿಸಿ ಆರಾಮವಾಗಿದ್ದಾರೆ. ಇಲಾಖಾ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇದ್ದರೂ ವೌನವಾಗಿದ್ದಾರೆ. ನನ್ನ ಕ್ಷೇತ್ರದಲ್ಲಿ 37 ಎಕರೆ ಜಾಗವನ್ನು ಅತಿಕ್ರಮಿಸಿರುವ ವರದಿ ನನ್ನಲ್ಲಿ ಇದ್ದು, ಅದನ್ನು ತಮಗೆ ನೀಡುತ್ತೇನೆ. ನಮ್ಮಲ್ಲಿ ವಸತಿಗಾಗಿ 400 ಅರ್ಜಿ ಗಳು ಬಂದಿವೆ. ಇಂತಹ ಅತಿಕ್ರಮಣವಾಗಿರುವ ಭೂಮಿಯನ್ನು ಅವರಿಗೆ ಒದಗಿಸುವ ಪ್ರಕ್ರಿಯೆ ಆಗಬೇಕು ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಜಿಲ್ಲಾಧಿಕಾರಿಯನ್ನುದ್ದೇಶಿಸಿ ಹೇಳಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ, ನಿವೇಶನ ಹಂಚಿಕೆ, ಅತಿಕ್ರಮಣ ಹಾಗೂ ಘನತ್ಯಾಜ್ಯ ಘಟಕಕ್ಕೆ ಪ್ರತಿ ತಾಲೂಕಿ ನಲ್ಲಿ ಜಾಗ ಮೀಸಲಿಡುವುದು ಗಂಭೀರ ವಿಚಾರವಾಗಿದೆ. ಮಾರ್ಚ್ ಹಾಗೂ ಎಪ್ರಿಲ್ ತಿಂಗಳಲ್ಲಿ ತಾಲೂಕು ಮಟ್ಟದಲ್ಲಿ ಗ್ರಾಮ ವಾಸ್ತವ್ಯ ಮಾದರಿ ಯಲ್ಲಿ ಮುಂಚಿತವಾಗಿ ದೂರುಗಳನ್ನು ಪಡೆದುಕೊಂಡು ಅರ್ಹರಿಗೆ ಸ್ಥಳದಲ್ಲೇ ನಿವೇಶನ ಹಂಚಿಕೆ, ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.

ಬಗರ್ ಹುಕುಂ ಅರ್ಜಿಗಳು ವಿಲೇವಾರಿ ಆಗುತಿತಿಲ್ಲ. ಈ ಬಗ್ಗೆ ಬೈಠಕ್ ನಡೆಸಲು ಶಾಸಕರು ಸಿದ್ಧರಿದ್ದರೂ ಅಧಿಕಾರಿಗಳು ತಯಾರಿಲ್ಲ. ಸಕ್ರಮಕ್ಕೆ ಸಂಬಂಧಿಸಿ ಹಲವು ಅರ್ಜಿಗಳು ವಿಲೇವಾರಿಗೆ ಬಾಕಿ ಇದೆ ಎಂದಾಗ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಮಧ್ಯೆಪ್ರವೇಶಿಸಿ, ಅಂತಹ ಅರ್ಜಿಗಳ ಪಟ್ಟಿ ತಯಾರಿಸಿ ತಕ್ಷಣವೇ ಶಾಸಕ ಅಧ್ಯಕ್ಷತೆಯಲ್ಲಿ ಬೈಠಕ್‌ಗೆ ಸಭೆ ಕರೆಯುವಂತೆ ತಹಸೀಲ್ದಾರ್‌ಗಳಿಗೆ ಸೂಚನೆ ನೀಡಿದರು.

ಡಿಸಿ ಮನ್ನಾ ಭೂಮಿ: ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗೆಹರಿಸಲು ಕ್ರಮ

ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲು ಮಾಡಿದ ಭೂಮಿ (ಡಿಸಿ ಮನ್ನಾ ಭೂಮಿ) ಕುರಿತಾದ ಚರ್ಚೆಯ ವೇಳೆ, ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ತಮ್ಮ ವ್ಯಾಪ್ತಿಯ ಕೋಡಿಂಬಾಡಿ ಗ್ರಾಮದಲ್ಲಿ ಐದು ಎಕರೆ ಡಿಸಿ ಮನ್ನಾ ಭೂಮಿಯನ್ನು ಅರಣ್ಯ ಇಲಾಖೆ ಅತಿಕ್ರಮಣ ಮಾಡಿದೆ. ಅಲ್ಲಿ 102 ಕೊರಗ ಕುಟುಂಬಗಳಿಗೆ 2 ವರ್ಷಗಳ ಹಿಂದೆ ಜಾಗ ಮಂಜೂರಾಗಿದ್ದರೂ ಹಸ್ತಾಂತರ ಆಗಿಲ್ಲ. ಅರಣ್ಯ ಇಲಾಖೆ ಅದು ತಮ್ಮ ಭೂಮಿ ಎಂದು ವಾದಿಸಿ ಮರ ಕಡಿಯಲೂ ಬಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಪ್ರತಿಕ್ರಿಯಿಸಿ, 422 ಕಂದಾಯ ಗ್ರಾಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಡಿಸಿ ಜಾಗದ ಪಟ್ಟಿ ಇದೆ. ಇಲ್ಲಿ ಅತಿಕ್ರಮಣ ಆಗದಿರುವ ಭೂಮಿ, ಅತಿಕ್ರಮಣ ಆಗಿರುವ ಭೂಮಿಯ ಕುರಿತಂತೆ  ತಿಂಗಳಿಗೆ ತಾಲೂಕಿನ ಕನಿಷ್ಠ ಐದು ಗ್ರಾಮಗಳಂತೆ ಸರ್ವೆ ಮಾಡಿ ಎಸ್‌ಸಿ/ಎಸ್‌ಟಿ ಕಾಲನಿ ರೀತಿಯಲ್ಲಿ ಪಾರ್ಕ್, ಶಾಲೆ, ಅಂಗನವಾಡಿಯನ್ನು ಒಳಗೊಂಡು ಲೇಔಟ್ ಮಾಡಿಸಿ ಕ್ರಮ ವಹಿಸಲಾಗುವುದು ಎಂದರು.

ಡೀಮ್ಡ್ ಫಾರೆಸ್ಟ್ ಸಮಸ್ಯೆ ಇದ್ದಲ್ಲಿ ಮೂಲಭೂತ ಸೌಕರ್ಯಗಳಿಗೆ, ನಿವೇಶನಕ್ಕೆ ಆ ಭೂಮಿಯನ್ನು ಹಂಚಿಕೆ ಮಾಡುವ ಅಧಿಕಾರ ಜಿಲ್ಲಾಧಿಕಾರಿಗೆ ಇದ್ದು, ಆ ನಿಟ್ಟಿನಲ್ಲಿ ತೆರವುಗೊಳಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಅಗತ್ಯ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ಅಧಿಕಾರಿಗಳು ತರಬೇಕೇ ಹೊರತು ಸಬೂಬು ನೀಡುವುದು ಬೇಡ ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಶೆಟ್ಟಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಡಿಸಿಪಿ ಹರಿರಾಂ, ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಪ್ರತಾಪ್ ಸಿಂಹ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News