ಕೇರಳ, ಮಹಾರಾಷ್ಟ್ರದಿಂದ ಆಗಮಿಸುವವರು ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಬೇಕು : ಉಡುಪಿ ಡಿಸಿ ಜಗದೀಶ್
ಉಡುಪಿ, ಮಾ.2: ಕೇರಳ ಮತ್ತು ಮಹಾರಾಷ್ಟ್ರದಿಂದ ಆಗಮಿಸುವವರು ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿ ಯನ್ನು ನೀಡಬೇಕು. ವರದಿ ಇಲ್ಲದೆ ಆಗಮಿಸುವವರ ವಿರುದ್ಧ ಎಪಿಡಮಿಕ್ ಕಾಯ್ದೆ ಅನ್ವಯ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಮಣಿಪಾಲ ರಜತಾದ್ರಿಯಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪರಿಣಿತ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಗೆ ಹೊರ ದೇಶ ಮತ್ತು ರಾಜ್ಯದಿಂದ ಆಗಮಿಸುವವರ ವಿವರಗಳನ್ನು ಸಾರ್ವಜನಿಕರು ಸಮೀಪದ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನೀಡ ಬೇಕು. ಆರೋಗ್ಯ ಇಲಾಖೆ ವತಿಯಿಂದ ಕೋವಿಡ್ ಸೋಂಕಿತರ ಪ್ರಾಥಮಿಕ ವಿವರಗಳನ್ನು ಸಂಗ್ರಹಿಸಿ, ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದರು.
ಸಭೆ ಸಮಾರಂಭಗಳಲ್ಲಿ ಸುರಕ್ಷಿತ ಅಂತರ ಪಾಲಿಸದಿರುವುದು ಮತ್ತು ಮಾಸ್ಕ್ ಧರಿಸದವರ ವಿರುದ್ಧ ಕ್ರಮ ಕೈಗೊಳ್ಳಲು ಮಾರ್ಷಲ್‌ಗಳನ್ನು ನೇಮಿಸಲಾಗುವುದು. ಅವರು ಸಭೆ ನಡೆಯುವ ಸ್ಥಳಗಳಿಗೆ ಆಗಮಿಸಿ ದಂಡ ಸೇರಿದಂತೆ ಕಟ್ಟಡದ ಮಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿರುವರು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನೇಶನ್ ಪ್ರಮಾಣ ಆರೋಗ್ಯ ಕಾರ್ಯಕರ್ತರಲ್ಲಿ ಶೇ.74 ಮತ್ತು ಫ್ರಂಟ್‌ಲೈನ್ ವರ್ಕರ್‌ನಲ್ಲಿ ಶೆ.73ರಷ್ಟು ಸಾಧನೆ ಆಗಿದೆ. ಇದು ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತಮವಾಗಿದೆ. ಪ್ರಸ್ತುತ 3ನೆ ಹಂತದ ಕೋವಿಡ್ ಲಸಿಕಾ ಕಾರ್ಯಕ್ರಮ ಆರಂಭ ಗೊಂಡಿದ್ದು, ಸಾರ್ವ ಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಬೇಕೆಂದು ಅವರು ತಿಳಿಸಿದರು.
ಆರೋಗ್ಯ ಇಲಾಖೆ ಪ್ರಸ್ತುತ ನಡೆಸುತ್ತಿರುವ ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸಿ, ಪ್ರಾಥಮಿಕ ಸಂಪರ್ಕಿತರ ಕುರಿತು ಹೆಚ್ಚಿನ ನಿಗಾ ವಹಿಸಬೇಕು ಎಂದು ಜಿಪಂ ಸಿಇಓ ಡಾ.ನವೀನ್ ಭಟ್ ಸೂಚಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುದೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಕೋವಿಡ್ ವಿಶೇಷಾಧಿಕಾರಿ ಡಾ.ಪ್ರೇಮಾನಂದ ಹಾಗೂ ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಜಿಲ್ಲಾ ಪರಿಣಿತ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ
ಜಿಲ್ಲೆಯಲ್ಲಿ ಈಗಾಗಲೇ ಶಿಕ್ಷಣ ಸಂಸ್ಥೆಗಳು ತೆರೆದಿದ್ದು, ಅಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕೋವಿಡ್ ಸುರಕ್ಷತಾ ನಿಯಮಗಳ ಪಾಲನೆ ಕಂಡು ಬರುತ್ತಿಲ್ಲ. ನಿಯಮ ಉಲ್ಲಂಘಿಸುವ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗುವಂತೆ ಕಂಡು ಬರುತ್ತಿದ್ದು, ಈ ಕುರಿತಂತೆ ಜಿಲ್ಲಾ ಪರಿಣಿತ ಸಲಹಾ ಸಮಿತಿ ಅಭಿಪ್ರಾಯದಂತೆ ಸಾರ್ವಜನಿಕರು ಕೋವಿಡ್ ಸುರಕ್ಷತಾ ನಿಯಮಗಳಾದ ಮಾಸ್ಕ್ ಬಳಕೆ, ಸ್ಯಾನಿಟೈಸರ್ ಬಳಕೆ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಕ್ರಮಗಳನ್ನು ತಪ್ಪದೆ ಪಾಲಿಸಬೇಕು ಎಂದರು.