ದೂರದ ದ್ವೀಪದಲ್ಲಿ ಮುಸ್ಲಿಮ್ ಕೊರೋನ ಸಂತ್ರಸ್ತರನ್ನು ದಫನ ಮಾಡಲು ಲಂಕಾ ಯೋಜನೆ

Update: 2021-03-03 16:36 GMT
ಸಾಂದರ್ಭಿಕ ಚಿತ್ರ

ಕೊಲಂಬೊ (ಶ್ರೀಲಂಕಾ), ಮಾ. 3: ಕೊರೋನ ವೈರಸ್ ಕಾಯಿಲೆಯಿಂದಾಗಿ ಮೃತಪಟ್ಟ ಮುಸ್ಲಿಮರನ್ನು ದೂರದ ದ್ವೀಪವೊಂದರಲ್ಲಿ ದಫನ ಮಾಡುವ ಶ್ರೀಲಂಕಾದ ನಿರ್ಧಾರವನ್ನು ಅಲ್ಲಿನ ಮುಸ್ಲಿಮ್ ಸಮುದಾಯ ಬುಧವಾರ ಪ್ರಬಲವಾಗಿ ವಿರೋಧಿಸಿದೆ.

ದಫನ ಮಾಡಿದರೆ ಕೊರೋನ ವೈರಸ್ ಹರಡುವುದಿಲ್ಲ ಎಂಬ ಪರಿಣತರ ಭರವಸೆಯ ಹೊರತಾಗಿಯೂ, ಕೋವಿಡ್-19ರಿಂದಾಗಿ ಮೃತಪಟ್ಟವರನ್ನು ದಫನ ಮಾಡುವುದನ್ನು ಶ್ರೀಲಂಕಾ ಸರಕಾರ ಕಳೆದ ವರ್ಷದ ಎಪ್ರಿಲ್‌ನಲ್ಲಿ ನಿಷೇಧಿಸಿತ್ತು. ಇತ್ತೀಚೆಗೆ ಅದನ್ನು ಜಾರಿಗೊಳಿಸಲು ಮುಂದಾಗಿತ್ತು.

ಇಸ್ಲಾಮಿಕ್ ಕಾನೂನಿನ ಪ್ರಕಾರ ದೇಹವನ್ನು ಸುಡುವುದು ನಿಷಿದ್ಧವಾಗಿದೆ ಎಂದು ಹೇಳಿರುವ ಮುಸ್ಲಿಮ್ ಸಮುದಾಯ ನೂತನ ನೀತಿಯನ್ನು ವಿರೋಧಿಸಿತ್ತು.

 ಆದರೆ, ಕಳೆದ ವಾರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶ್ರೀಲಂಕಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆ ನೀತಿಯನ್ನು ರದ್ದುಗೊಳಿಸಲಾಗಿತ್ತು. ಮುಸ್ಲಿಮರ ಧಾರ್ಮಿಕ ವಿಧಿಗಳನ್ನು ಗೌರವಿಸುವಂತೆ ಅವರು ಕೊಲಂಬೊವನ್ನು ಒತ್ತಾಯಿಸಿದ್ದರು.

ಈಗ ದೇಶದ ಉತ್ತರ ಕರಾವಳಿಯಿಂದ 13 ಕಿಲೋಮೀಟರ್ ದೂರದಲ್ಲಿರುವ ಇರನೈತೀವು ಎಂಬ ಸಣ್ಣ ದ್ವೀಪದಲ್ಲಿ ಮುಸ್ಲಿಮ್ ಕೊರೋನ ಬಲಿಪಶುಗಳನ್ನು ದಫನ ಮಾಡುವ ಪ್ರಸ್ತಾವವನ್ನು ಅಧಿಕಾರಿಗಳು ಮುಂದಿಟ್ಟಿದ್ದಾರೆ.

ಇದನ್ನು ವಿರೋಧಿಸಿ ಬುಧವಾರ ಕೆಥೋಲಿಕ್ ಪಾದ್ರಿಗಳ ನೇತೃತ್ವದಲ್ಲಿ ತಮಿಳು ನಿವಾಸಿಗಳು ಕಿಲಿನೋಚ್ಚಿಯಲ್ಲಿ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News