ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಿಡಿಸಿದ ಪೊಲಾರ್ಡ್

Update: 2021-03-04 05:13 GMT

Photo source: Twitter(@windiescricketI)
 

ಆ್ಯಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಶ್ರೀಲಂಕಾದ ಸ್ಪಿನ್ನರ್ ಅಕಿಲ ಧನಂಜಯ ಹ್ಯಾಟ್ರಿಕ್ ವಿಕೆಟ್ ಪಡೆದು ಸಂಭ್ರಮಿಸಿದ್ದರು. ಆದರೆ, ಅವರ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ವಿಂಡೀಸ್ ನಾಯಕ ಕಿರೋನ್ ಪೊಲಾರ್ಡ್ ಅವರು ಧನಂಜಯ ಅವರ ಮುಂದಿನ ಓವರ್ ನಲ್ಲಿ ಎಲ್ಲ 6 ಎಸೆತಗಳನ್ನು ಸಿಕ್ಸರ್ ಗೆ ಅಟ್ಟುವ ಮೂಲಕ ಕ್ರಿಕೆಟ್‍ಗೆ ಅತ್ಯಂತ ನಾಟಕೀಯ ತಿರುವು ನೀಡಿದರು.

ಪೊಲಾರ್ಡ್ ಟ್ವೆಂಟಿ-20 ಕ್ರಿಕೆಟ್ ನಲ್ಲಿ ಒಂದೇ ಓವರ್ ನಲ್ಲಿ 6 ಸಿಕ್ಸರ್ ಗಳನ್ನು ಸಿಡಿಸಿದ ಎರಡನೇ ಬ್ಯಾಟ್ಸ್ ಮನ್ ಆಗಿದ್ದಾರೆ. ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರನಾಗಿದ್ದಾರೆ.

ದ.ಆಫ್ರಿಕಾದ ಹರ್ಷಲ್ ಗಿಬ್ಸ್ ನೆದರ್ ಲ್ಯಾಂಡ್ ವಿರುದ್ದದ ಏಕದಿನ ಪಂದ್ಯದಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿದ್ದರು. ಭಾರತದ ಯುವರಾಜ್ ಸಿಂಗ್ 2007ರ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಬೌಲಿಂಗ್ ನಲ್ಲಿ 6 ಸಿಕ್ಸರ್ ಗಳನ್ನು ಸಿಡಿಸಿ ವಿಶ್ವದ ಗಮನ ಸೆಳೆದಿದ್ದರು.

ವೆಸ್ಟ್ ಇಂಡೀಸ್ 3.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 52 ರನ್ ಗಳಿಸಿತ್ತು. ಧನಂಜಯ ಅವರು ಎವಿನ್ ಲೂವಿಸ್, ಕ್ರಿಸ್ ಗೇಲ್ ಹಾಗೂ ನಿಕೊಲಸ್ ಪೂರನ್ ಅವರನ್ನು ಸತತ 3 ಎಸೆತಗಳಲ್ಲಿ ಪೆವಿಲಿಯನ್‍ಗೆ ಅಟ್ಟಿ ಆಘಾತ ನೀಡಿದರು.

ಧನಂಜಯ ಇನಿಂಗ್ಸ್ ನ 6ನೇ ಓವರ್ ನಲ್ಲಿ  ಮೊದಲ ಎಸೆತವನ್ನು ಪೊಲಾರ್ಡ್ ಸಿಕ್ಸರ್ ಸಿಡಿಸಿದಾಗ ಚೆಂಡು ಕಾಣೆಯಾಯಿತು. ಎರಡನೇ ಸಿಕ್ಸರ್ ಸೈಟ್‍ಸ್ಕ್ರೀನ್ ಗೆ ಬಡಿಯಿತು. ಮೂರನೇ ಎಸೆತವನ್ನು ಲಾಂಗ್ ಆಫ್ ಗೆ, ನಾಲ್ಕನೇ ಎಸೆತವನ್ನು ಡೀಪ್ ಮಿಡ್ ವಿಕೆಟ್ ನತ್ತ ಅಟ್ಟಿದರು. ಐದನೇ ಎಸೆತವನ್ನು ಲಾಂಗ್ ಆನ್ ನತ್ತ ಅಟ್ಟಿದರು. ಆರನೇ ಎಸೆತವನ್ನು ಡೀಪ್ ಮಿಡ್ ವಿಕೆಟ್ ನತ್ತ ತಳ್ಳುವುದರೊಂದಿಗೆ ಸಿಕ್ಸ್ ಸಿಕ್ಸರ್ ಗಳನ್ನು ಪೂರೈಸಿದರು.

ಪೊಲಾರ್ಡ್ ಮುಂದಿನ ಓವರ್ ನಲ್ಲಿ ಎಲ್ಬಿಡಬ್ಲು ಬಲೆಗೆ ಬಿದ್ದರು. ವೆಸ್ಟ್ ಇಂಡೀಸ್ 132 ರನ್ ಗುರಿಯನ್ನು ಇನ್ನೂ 6 ಓವರ್ ಗಳು ಬಾಕಿ ಇರುವಾಗಲೇ ತಲುಪಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News