ಡಿ.ಜೆ.-ಕೆ.ಜಿ.ಹಳ್ಳಿ ಗಲಭೆಗೂ ನನಗೂ ಯಾವುದೆ ಸಂಬಂಧವಿಲ್ಲ: ಮಾಜಿ ಶಾಸಕ ಪ್ರಸನ್ನಕುಮಾರ್

Update: 2021-03-04 17:46 GMT

ಬೆಂಗಳೂರು, ಮಾ.4: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೂ ನನಗೂ ಯಾವುದೆ ಸಂಬಂಧವಿಲ್ಲ. ಸಂಪತ್‍ರಾಜ್ ಹಾಗೂ ಶಾಸಕ ಶ್ರೀನಿವಾಸಮೂರ್ತಿ ನಡುವಿನ ವೈಯಕ್ತಿಕ ವಿಚಾರಕ್ಕೆ ಈ ಘಟನೆ ಆಗಿದೆ ಎನ್ನಲಾಗಿದೆ. ಇಂತಹ ಘಟನೆ ಆಗಬಾರದಿತ್ತು ಎಂದು ಮಾಜಿ ಶಾಸಕ ಪ್ರಸನ್ನಕುಮಾರ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ನಡೆದಾಗ ನಾನು ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದರೆ, ಅದನ್ನು ಉರಿಯುವ ಬೆಂಕಿಯಲ್ಲಿ ರಾಜಕೀಯ ರೊಟ್ಟಿ ಬೇಯಿಸಿಕೊಂಡಂತೆ ಆಗುತ್ತಿತ್ತು. ಆದರೆ, ನಾನು ಅಂತಹ ಕೆಲಸಕ್ಕೆ ಕೈ ಹಾಕುವವನಲ್ಲ ಎಂದರು.

ಕ್ಷೇತ್ರದಲ್ಲಿ ಇವತ್ತು ಪ್ರಮುಖವಾಗಿ ಮುಸ್ಲಿಮರು ತುಂಬಾ ಆತಂಕ ಹಾಗೂ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಅವರಿಗೆ ಸಾಂತ್ವನ ಹೇಳಿ, ಅವರ ನೋವನ್ನು ಕಡಿಮೆ ಮಾಡುವ ಅಗತ್ಯವಿದೆ. ದಿನಗೂಲಿ ಪಡೆಯುವ, ಕುಟುಂಬಗಳಿಗೆ ಆಧಾರವಾಗಿರುವವರೇ ಜಾಮೀನು ಸಿಕ್ಕಿದರೂ, ಶ್ಯೂರಿಟಿ ಇಲ್ಲದೆ ಜೈಲುಗಳಿಂದ ಹೊರಗೆ ಬರಲು ಸಾಧ್ಯವಿಲ್ಲದೆ ಪರದಾಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಿ ನಾನು ಎಷ್ಟು ದೊಡ್ಡ ತಪ್ಪು ಮಾಡಿದ್ದೇನೆ ಎಂಬ ಅರಿವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪುನಃ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದೇನೆ. ನನ್ನ ಮನೆಗೆ ನಾನು ವಾಪಸ್ ಬಂದಿರುವಂತೆ ಮಾನಸಿಕ ನೆಮ್ಮದಿ ಸಿಕ್ಕಿದೆ ಎಂದು ಪ್ರಸನ್ನ ಕುಮಾರ್ ಹೇಳಿದರು. 

ನನ್ನನ್ನು ನಿನ್ನೆ ಮೊನ್ನೆ ಕಾಂಗ್ರೆಸ್‍ಗೆ ಬಂದವರು ಎಂದು ಹೇಳುತ್ತಿದ್ದಾರೆ. ನಾನು ನನ್ನ ತಂದೆಯ ಕಾಲದಿಂದಲೂ ಕಾಂಗ್ರೆಸ್ ಪಕ್ಷದಲ್ಲಿದ್ದವನು. ಕಾಂಗ್ರೆಸ್ ಪಕ್ಷ ನನಗೆ 7 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಿ.ಫಾರಂ ನೀಡಿದೆ. ಅದರಲ್ಲಿ ನಾಲ್ಕು ಬಾರಿ ನಾನು ಗೆದ್ದಿದ್ದೇನೆ ಎಂದು ಪರೋಕ್ಷವಾಗಿ ಶಾಸಕ ಶ್ರೀನಿವಾಸಮೂರ್ತಿ ವಿರುದ್ಧ ಅವರು ವಾಗ್ದಾಳಿ ನಡೆಸಿದರು. 

ಕಳೆದ ಐದು ವರ್ಷಗಳಿಂದ ನಾನು ಸುಮ್ಮನೆ ಮನೆಯಲ್ಲಿ ಕೂತಿಲ್ಲ. ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಅದರ ಪರಿಣಾಮವಾಗಿಯೆ ಆತ(ಶ್ರೀನಿವಾಸಮೂರ್ತಿ) ಕಳೆದ ಚುನಾವಣೆಯಲ್ಲಿ 80 ಸಾವಿರ ಮತಗಳ ಅಂತರದಿಂದ ಗೆಲ್ಲಲು ಸಾಧ್ಯವಾಯಿತು. ಆದರೆ, ಇವತ್ತು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಯಾರೂ ಆತನ ಜೊತೆಯಲ್ಲಿ ಇಲ್ಲ. ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿ ನಾನು ಪಕ್ಷ ಸಂಘಟನೆ ಮಾಡಬೇಕು ಎಂಬುದರ ಬಗ್ಗೆ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಂತೆ ಕೆಲಸ ಮಾಡುತ್ತೇನೆ ಎಂದು ಪ್ರಸನ್ನ ಕುಮಾರ್ ಹೇಳಿದರು.

ಇತ್ತೀಚೆಗೆ ತಮ್ಮ ಆಡಿಯೋ ವೈರಲ್ ಆಗಿರುವ ಕುರಿತು ಪ್ರತಿಕ್ರಿಯಿಸಿದ ಪ್ರಸನ್ನಕುಮಾರ್, ಶೇ.200ರಷ್ಟು ಶ್ರೀನಿವಾಸಮೂರ್ತಿಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುವುದಿಲ್ಲ ಎಂದು ನಾನು ಹೇಳಿದ್ದೇನೆಯೆ ಹೊರತು, ನನಗೆ ಟಿಕೆಟ್ ಸಿಗುತ್ತದೆ ಎಂದು ಹೇಳಿಲ್ಲ. ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರಕ್ಕೆ ಡಾ.ಜಿ.ಪರಮೇಶ್ವರ್ ಬಂದರೂ ಸ್ವಾಗತ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News