ರ್ಯಾಗಿಂಗ್ ಪ್ರಕರಣ : ಎರಡು ಕಾಲೇಜಿನ 7 ಮಂದಿ ವಿದ್ಯಾರ್ಥಿಗಳ ಬಂಧನ

Update: 2021-03-05 11:52 GMT

ಮಂಗಳೂರು, ಮಾ.5: ನಗರ ಮತ್ತು ಹೊರವಲಯದ ಎರಡು ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ಎರಡು ಪ್ರತ್ಯೇಕ ರ್ಯಾಗಿಂಗ್ ಹಾಗೂ ಕಾಲೇಜೊಂದರ ಉಪನ್ಯಾಸಕರಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ನಗರ ಮತ್ತು ಸುರತ್ಕಲ್ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ.

ಪೊಲೀಸ್ ಆಯುಕ್ತ ಶಶಿಕುಮಾರ್ ಶುಕ್ರವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮುಕ್ಕ ಶ್ರೀನಿವಾಸ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಅದೇ ಕಾಲೇಜಿನ ಮೂರನೆ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಬೈಕಂಪಾಡಿಯ ಮುಹಮ್ಮದ್ ಬಾಝಿಲ್, ಮುಕ್ಕದ ಕೆ.ಯು. ಶಮೀಲ್, ಮುಲ್ಕಿಯ ಸಂಭ್ರಮ್ ಆಳ್ವಾ, ಕುಲಶೇಖರದ ಅಶ್ವಿನ್ ಜಾನ್ಸನ್ ಎಂಬವರು ರ್ಯಾಗಿಂಗ್ ನಡೆಸಿದ್ದರು.

ಈ ಬಗ್ಗೆ ನೊಂದ ವಿದ್ಯಾರ್ಥಿ ನೀಡಿದ್ದ ದೂರಿನಂತೆ ಕಾಲೇಜಿನ ಡೀನ್ ಆರೋಪಿತ ನಾಲ್ವರು ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದರು.
ಈ ಮಧ್ಯೆ ಆರೋಪಿತ ವಿದ್ಯಾರ್ಥಿಗಳು ಕಾಲೇಜಿನ ಉಪನ್ಯಾಸಕ ಡಾ. ಪ್ರವೀಣ್‌ರನ್ನು ಅವಹೇಳನಗೈದು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿ ಮತ್ತು ಉಪನ್ಯಾಸಕ ನೀಡಿದ ಎರಡು ಪ್ರತ್ಯೇಕ ದೂರನ್ನು ಸುರತ್ಕಲ್ ಪೊಲೀಸರು ದಾಖಲಿಸಿದ್ದಾರೆ. ಅಲ್ಲದೆ ಬಂಧಿತ ವಿದ್ಯಾರ್ಥಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ನಗರದ ಬಲ್ಮಠದ ಯೆನೆಪೊಯ ಪದವಿ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ನಡೆಸಿದ ಆರೋಪದ ಮೇರೆಗೆ ಕೇರಳ ಮೂಲದ ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಕೇರಳ ಮೂಲದ ಬಿಕಾಂ ವಿದ್ಯಾರ್ಥಿ ಮುಹಮ್ಮದ್ ಆದಿಲ್, ಬಿಬಿಎಂ ವಿದ್ಯಾರ್ಥಿ ರೈಝಾನ್ ರಿಝಾನ್, ಬಿಎಸ್ಸಿ ವಿದ್ಯಾರ್ಥಿ ನಿಝಾಮುದ್ದೀನ್ ಬಂಧಿತ ಆರೋಪಿಗಳಾಗಿದ್ದಾರೆ. ನಗರದ ಹಾಸ್ಟೆಲ್‌ನಲ್ಲಿರುವ ಇವರು ಯೆನೆಪೊಯ ಕಾಲೇಜಿನ ಇತರ 9 ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಈ 9 ವಿದ್ಯಾರ್ಥಿಗಳು ನಗರದ ಪಂಪ್‌ವೆಲ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಇವರೂ ಕೂಡ ಕೇರಳ ಮೂಲದ ವಿದ್ಯಾರ್ಥಿಗಳಾಗಿದ್ದಾರೆ. ಆರೋಪಿತ ಮೂವರು ವಿದ್ಯಾರ್ಥಿಗಳು 9 ವಿದ್ಯಾರ್ಥಿಗಳಿಗೆ ನಿರಂತರವಾಗಿ ರ್ಯಾಗಿಂಗ್ ನಡೆಸುತ್ತಿದ್ದರು. ಆ ಪೈಕಿ ಒಬ್ಬ ವಿದ್ಯಾರ್ಥಿಗೆ ಅತೀ ಹೆಚ್ಚು ರ್ಯಾಗಿಂಗ್ ನಡೆಸುತ್ತಿದ್ದರು. ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿಯು ಮನೆಯವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಅಲ್ಲದೆ ಮನೆಯವರ ಸಲಹೆಯ ಮೇರೆಗೆ ಕಾಲೇಜಿನ ಮುಖ್ಯಸ್ಥರ ಗಮನಕ್ಕೂ ತಾರದೆ ನೇರವಾಗಿ ಕಂಕನಾಡಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿದ ಮೂವರನ್ನು ಬಂಧಿಸಿದ್ದಾರೆ. ಆರೋಪಿತ ಮೂವರು ವಿದ್ಯಾರ್ಥಿ ಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರ.

ದೂರು ನೀಡಿ: ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ರ್ಯಾಗಿಂಗ್ ಪ್ರಕರಣವನ್ನು ಸಂಸ್ಥೆಯ ಮುಖ್ಯಸ್ಥರು ಗಂಭೀರವಾಗಿ ಪರಿಗಣಿಸಬೇಕು. ಯಾವ ಕಾರಣಕ್ಕೂ ಮಾತುಕತೆಯ ಮೂಲಕ ಬಗೆಹರಿಸುವ ಪ್ರಯತ್ನ ಮಾಡಬಾರದು. ರ್ಯಾಗಿಂಗ್‌ಗೆ ಕಡಿವಾಣ ಹಾಕುವುದಲ್ಲದೆ ರ್ಯಾಗಿಂಗ್ ನಡೆದ ಪ್ರಕರಣ ಬೆಳಕಿಗೆ ಬಂದೊಡನೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಅಲ್ಲದೆ ರ್ಯಾಗಿಂಗ್‌ಗೆ ಕಡಿವಾಣ ಹಾಕಲು ಶ್ರಮಿಸಬೇಕು.

ಯಾವುದೇ ವಿದ್ಯಾರ್ಥಿಗೆ ರ್ಯಾಗಿಂಗ್ ಆಗಿದ್ದರೆ ಅಂತಹವರು ನೇರವಾಗಿ ಪೊಲೀಸ್ ಇಲಾಖೆಗೆ ದೂರು ನೀಡಬಹುದಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News