ಉಡುಪಿ: ಮಾ.9ಕ್ಕೆ ಒಡಿಯೂರು ಶ್ರೀಗಳ ಷಷ್ಠಬ್ದ ಸಂಭ್ರಮ

Update: 2021-03-05 13:42 GMT

ಉಡುಪಿ, ಮಾ.5: ಒಡಿಯೂರು ಶ್ರೀಗುರುದೇವದತ್ತಾ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ 60ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯ ಅಂಗವಾಗಿ ಮಾ.9ರ ಮಂಗಳವಾರ ಪರ್ಕಳದ ಶ್ರೀಸುರಕ್ಷಾ ಸಭಾಭವನದಲ್ಲಿ ಅಪರಾಹ್ನ 2:00ರಿಂದ ‘ಜ್ಞಾನವಾಹಿನಿ’ ಉಡುಪಿ ವಲಯ ಸಮಿತಿ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು ಎಂದು ಒಡಿಯೂರು ಶ್ರೀಗಳ ಷಷ್ಠಬ್ದ ಸಂಭ್ರಮ ಉಡುಪಿ ವಲಯ ಸಮಿತಿಯ ಉಪಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಸಂದರ್ಭದಲ್ಲಿ ಒಡಿಯೂರು ಶ್ರೀಚಾರಿಟೇಬಲ್ ಟ್ರಸ್ಟ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಉಡುಪಿ ವಲಯದ ಘಟ ಸಮಿತಿಗಳ, ಒಡಿಯೂರು ಶ್ರೀಗುರುದೇವಾ ಸೇವಾ ಬಳಗ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪದಪ್ರದಾನ ಸಮಾರಂಭವೂ ನಡೆಯಲಿದೆ ಎಂದರು.

ಒಡಿಯೂರು ಶ್ರೀಗಳ ಷಷ್ಠಬ್ಧದ ಸಂಭ್ರಮಾಚರಣೆಗಾಗಿ ಡಾ.ಜಿ.ಶಂಕರ್ ಗೌರವಾಧ್ಯಕ್ಷತೆ, ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆಯಲ್ಲಿ ಸಮಿತಿ ಯೊಂದನ್ನು ರಚಿಸಲಾಗಿದೆ. ಇದರ ಅಂಗವಾಗಿ ಜ್ಞಾನವಾಹಿನಿ ಎಂಬ ವಿವಿಧ ಸರಣಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುವುದು. ಇವುಗಳಲ್ಲಿ 60 ಮನೆಗಳಿಗೆ ಗಂಧದ ಗಿಡ, 60 ಅಂಗನವಾಡಿ ಕೇಂದ್ರ ಗಳಿಗೆ ಮೂಲಭೂತ ಸೌಕರ್ಯ, 60 ಮಂದಿಗೆ ತುಳುಲಿಪಿ ಬರಹ ಕಾರ್ಯಾಗಾರ, 60 ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಅರ್ಪಿಸಲಾಗುವುದು ಎಂದರು.

ಮಾ.9ರಂದು ಅಪರಾಹ್ನ 2 ರಿಂದ ಪರ್ಕಳ ಶ್ರೀಸುರಕ್ಷಾ ಸಭಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಒಡಿಯೂರು ಶ್ರೀಗಳು ಉದ್ಘಾಟಿಸಲಿದ್ದಾರೆ. ಸಾಧ್ವಿ ಶ್ರೀಮಾತಾನಂದಮಯೀ ಉಪಸ್ಥಿತರಿರುವರು. ಉಳಿದಂತೆ ಮೂಡಬಿದರೆಯ ಡಾ. ಮೋಹನ ಆಳ್ವ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿ.ಶಂಕರ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ಹಾಗೂ ಇತರರು ಉಪಸ್ಥಿತರಿರುವರು.

ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ನವನೀತ್ ಶೆಟ್ಟಿ ಕದ್ರಿ, ಉಡುಪಿ ಸಮಿತಿಯ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಪ್ರಧಾನ ಕಾರ್ಯದರ್ಶಿ ಕೆ.ಪ್ರಭಾಕರ ಶೆಟ್ಟಿ ಕಬ್ಯಾಡಿ, ಕೋಶಾಧಿಕಾರಿ ಅಮಿತಾ ಗಿರೀಶ್, ಜೊತೆ ಕಾರ್ಯದರ್ಶಿ ಚಂದ್ರಿಕಾ ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News