​ಸಂತನಂತೆ ಬದುಕಿದ ಇದಿನಬ್ಬರ ವ್ಯಕ್ತಿತ್ವ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ: ಟಿ.ಎಸ್. ನಾಗಭರಣ

Update: 2021-03-05 14:47 GMT

ಮಂಗಳೂರು, ಮಾ.5: ಬಿಎಂ ಇದಿನಬ್ಬ ನಾಡಿನ ದಿವ್ಯಚೇತನ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುವಾಗ ಅನುಭವಗಳು ಅನುಭಾವಿಗಳಾಗುತ್ತವೆ. ಇದಿನಬ್ಬರ ವ್ಯಕ್ತಿತ್ವ ಅನುಭಾವಿಯಾಗಿ ರೂಪುಗೊಂಡಿದೆ. ನಿಸ್ವಾರ್ಥಿಯಾಗಿದ್ದ ಇದಿನಬ್ಬ ಕನ್ನಡಕ್ಕಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟಿದ್ದರು. ಸಾಹಿತ್ಯದಲ್ಲಿ ರಾಜನಾಗಿ ಮೆರೆಯುವ ಅವಕಾಶವಿದ್ದರೂ ಕೂಡ ರಾಜನಾಗದೆ ಕನ್ನಡದ ಸೇವಕನಾಗಿ ಸಮಾಜಕ್ಕೆ ಆದರ್ಶಪ್ರಾಯರಾದರು. ಹೀಗೆ ತನ್ನ ನಡೆನುಡಿಯಿಂದ ಸಂತನಂತೆ ಬದುಕಿದ ಇದಿನಬ್ಬರ ವ್ಯಕ್ತಿತ್ವ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಹೇಳಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ನಗರದ ಪುರಭವನದ ಬಿಎಂ ಇದಿನಬ್ಬ ವೇದಿಕೆಯಲ್ಲಿ ಶುಕ್ರವಾರ ನಡೆದ ಮಾಜಿ ಶಾಸಕ, ಹಿರಿಯ ಕವಿ, ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ದಿ. ಬಿ.ಎಂ. ಇದಿನಬ್ಬ ಜನ್ಮ ಶತಮಾನೋತ್ಸವ (ಮರ್ಹೂಂ ಬಿ.ಎಂ. ಇದಿನಬ್ಬ ನೂರು ವರ್ಸ ಒರು ನೆನಪು) ಕಾರ್ಯಕ್ರಮದಲ್ಲಿ ಬಿ.ಎಂ. ಇದಿನಬ್ಬ ಸ್ಮರಣಾರ್ಥ ಕಲೆ, ಸಂಸ್ಕೃತಿ, ನಾಡು, ನುಡಿಗಾಗಿ ಸೇವೆ ಸಲ್ಲಿಸುತ್ತಿರುವ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವಾ ಅವರಿಗೆ ಗೌರವ ಪ್ರಶಸ್ತಿ ಪ್ರದಾನಗೈದು ಅವರು ಮಾತನಾಡಿದರು.

ಸಾಹಿತ್ಯ ಮತ್ತು ನಡೆನುಡಿ ಮೂಲಕ ವ್ಯಕ್ತಿತ್ವ ಅನಾವರಣಗೊಳಿಸಿದ್ದ ಬಿಎಂ ಇದಿನಬ್ಬ ಅವರ ಬದುಕು ಸುಸಂಸ್ಕೃತವಾಗಿತ್ತು. ಇಂತಹ ಸುಸಂಸ್ಕೃತ ಮಾದರಿಗಳಿಲ್ಲದೆ ಸುಂದರ ಸಮಾಜ ಕಟ್ಟಲು ಎಂದಿಗೂ ಸಾಧ್ಯವಿಲ್ಲ. ಸಮಾಜಕ್ಕೆ ಒಳಿತನ್ನು ಬಯಸಿದ್ದ ಇದಿನಬ್ಬ ಕೋಟ್ಯಂತರ ಕನ್ನಡಿಗರ ಮನದಲ್ಲಿ ನೆಲೆನಿಂತವರಾಗಿದ್ದರು ಎಂದ ನಾಗಭರಣ, ಇಂದು ಇದಿನಬ್ಬರು ಇದ್ದಿದ್ದರೆ ಕನ್ನಡ ಶಾಲೆಗಳ ದುಸ್ಥಿತಿಯ ಬಗ್ಗೆ ಧ್ವನಿ ಎತ್ತುತ್ತಿದ್ದರು. ಶಾಲೆಗಳ ಉಳಿವಿಗಾಗಿ ಹೋರಾಟ ಮಾಡುತ್ತಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ ಬಿಎಂ ಇದಿನಬ್ಬ ಅವರು ಬ್ಯಾರಿ ಸಮುದಾಯದಲ್ಲಿ ಹುಟ್ಟಿ ಬೆಳೆದರೂ ಅಪ್ಪಟ ಕನ್ನಡಿಗನಾಗಿ ಕನ್ನಡಿಗರ ಮನೆ ಮತ್ತು ಮನ ತಲುಪಿದರು. ಐಕ್ಯಗಾನದ ಮೂಲಕ ಸೌಹಾರ್ದ ಬೆಳೆಸಿದ್ದರು. ಆದರ್ಶ ವ್ಯಕ್ತಿತ್ವದ ಅವರನ್ನು ಮುಂದಿನ ತಲೆಮಾರು ಮರೆಯಬಾರದು ಮತ್ತು ಸದಾ ನೆನಪಿನಲ್ಲಿಡುವಂತಾಗಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಸಂಸ್ಮರಣಾ ಭಾಷಣಗೈದ ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಇದಿನಬ್ಬರ ವೇಷಭೂಷಣ, ನಡೆನುಡಿಯಿಂದ ನಾನು ಪ್ರಭಾವಿತನಾಗಿದ್ದೆ. ಮೂಡುಬಿದಿರೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ಭಾಷಣವು ಸರಕಾರದ ಕಣ್ತೆರೆಸಿತ್ತು.  ಕನ್ನಡದ ಕೋಗಿಲೆಯಂತಿದ್ದ ಅವರು ಕಡಲತಡಿಯ ಸಂತ ಎಂದರೂ ತಪ್ಪಾಗಲಾರದು. ಹಾಗಾಗಿ ಇದಿನಬ್ಬರ ಹೆಸರನ್ನು ಸಾಹಿತ್ಯ, ಕನ್ನಡ ಭವನ, ವೇದಿಕೆ ಅಥವಾ ಪ್ರಮುಖ ರಸ್ತೆಗೆ ಇಡಬೇಕು ಎಂದರು. ಶಾಸಕ ಯು.ಟಿ. ಖಾದರ್, ಕಸಾಪ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಉಳ್ಳಾಲ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ಉಳ್ಳಾಲ ಮಾತನಾಡಿದರು.

ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯ ಶಂಶೀರ್ ಬುಡೋಳಿ ವಂದಿಸಿದರು.

ಇದಿನಬ್ಬರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುವುದು ನನಗೆ ಹೆಮ್ಮೆಯ ವಿಚಾರವಾಗಿದೆ. ಮೂಡುಬಿದಿರೆಯಲ್ಲಿ ನಡೆದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾಗ ನಾಲ್ಕು ದಿನಗಳ ಕಾಲ ಅವರ ಬದುಕನ್ನು ನಾನು ತುಂಬಾ ಹತ್ತಿರದಿಂದೆ ಕಂಡಿದ್ದೆ. ಅವರ ಕನ್ನಡ ಪ್ರೀತಿ ಕಂಡು ಕಣ್ತುಂಬಿದ್ದೆ. ತಿಂಗಳೊಳಗೆ ಅವರ ಸ್ಮರಣ ಸಂಚಿಕೆಯನ್ನು ಹೊರತರಲಾಗುವುದು ಎಂದು ಪ್ರಶಸ್ತಿ ಸ್ವೀಕರಿಸಿದ ಡಾ. ಮೋಹನ್ ಆಳ್ವ ಹೇಳಿದರು.

ಬಿಎಂ ಇದಿನಬ್ಬ ಅವರ ಪುತ್ರರಾದ ಬಿಎಂ ಅಬ್ದುಲ್ ರಹ್ಮಾನ್ ಭಾಷಾ, ಬಿಎಂ ಬದ್ರುದ್ದೀನ್, ಪುತ್ರಿಯರಾದ ಫಾತಿಮಾ, ಖತೀಜಮ್ಮ, ನಫೀಸಾ, ಝುಬೈದಾ ಅವರನ್ನು ಸನ್ಮಾನಿಸಲಾಯಿತು.

ಬಿಎಂ ಇದಿನಬ್ಬ ಅವರ ಬದುಕಿನ ಬಗ್ಗೆ ಮೊಮ್ಮಗ ಶಬ್ಬೀರ್ ಹಸನ್ ತೆರೆದಿಟ್ಟರಲ್ಲದೆ,  ಬಿಎಂ ಇದಿನಬ್ಬರ ಆತ್ಮಚರಿತ್ರೆ ಹೊರತರುವ ಪ್ರಯತ್ನ ಆಗಬೇಕಿದೆ. ಅದು ಇದಿನಬ್ಬರ ಅಭಿಲಾಶೆಯೂ ಆಗಿತ್ತು. ಆತ್ಮಚರಿತ್ರೆ ರಚಿಸಲು ಕುಟುಂಬಸ್ಥರು ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ ಎಂದು ಭರವಸೆ ನೀಡಿದರು. ಅಲ್ಲದೆ "ಐಕ್ಯಗಾನ"ವನ್ನು ಹಾಡಿ ಇದಿನಬ್ಬರ ಕಂಠವನ್ನು ನೆನಪಿಸಿದರು.

ಆತ್ಮಚರಿತ್ರೆಯ ಕುರಿತು ತನ್ನ ಉದ್ಘಾಟನಾ ಭಾಷಣದಲ್ಲಿ ಪ್ರತಿಕ್ರಿಯಿಸಿದ ಟಿಎಸ್ ನಾಗಭರಣ ಕುಟುಂಬದ ಸದಸ್ಯರು ಸಹಕರಿಸಿದರೆ ನಾಲ್ಕು ತಿಂಗಳೊಳಗೆ ಇದಿನಬ್ಬರ ಆತ್ಮಚರಿತ್ರೆಯನ್ನು ಹೊರತರುವುದಾಗಿ ಹೇಳಿದರು. ಬಿಎಂ ಇದಿನಬ್ಬರ ಮರಿಮೊಮ್ಮಗಳು ನಫೀಸಾ ಹಿಬಾ ತನ್ನ ಮುತ್ತಜ್ಜನ ಮೇರು ವ್ಯಕ್ತಿತ್ವದ ಬಗ್ಗೆ ಮಾತನಾಡಿದರು.

ಕವಿಗೋಷ್ಠಿ: ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರ್ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿ ಭಾಸ್ಕರ್ ರೈ ಕುಕ್ಕುವಳ್ಳಿ (ತುಳು), ತೋನ್ಸೆ ಪುಷ್ಕಳ ಕುಮಾರ್ (ಕನ್ನಡ), ಬಿ.ಎ. ಮುಹಮ್ಮದ್ ಅಲಿ (ಬ್ಯಾರಿ), ಬಶೀರ್ ಅಹ್ಮದ್ ಕಿನ್ಯ (ಮಲಾಮೆ), ಪ್ರೊ. ಫ್ಲೋರಾ ಕ್ಯಾಸ್ತಲಿನೊ (ಕೊಂಕಣಿ) ಕವನ ವಾಚಿಸಿದರು.

ಬಿ.ಎಂ. ಇದಿನಬ್ಬ ಅವರ ‘ಬದುಕು ಮತ್ತು ಬರಹ’ ಎಂಬ ವಿಷಯದಲ್ಲಿ ಬ್ಯಾರಿ ಅಧ್ಯಯನ ಪೀಠದ ಸದಸ್ಯ ಅಹ್ಮದ್ ಬಾವಾ ಮೊಹಿದಿನ್ ಪಡೀಲ್‌ರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ಪತ್ರಕರ್ತರಾದ ಚಿದಂಬರ ಬೈಕಂಪಾಡಿ, ಹಂಝ ಮಲಾರ್, ಉಳ್ಳಾಲ ಸೈಯದ್ ಮದನಿ ದರ್ಗಾ ಆಡಳಿತ ಸಮಿತಿಯ ಸದಸ್ಯ ಫಾರೂಕ್ ಉಳ್ಳಾಲ್ ಮಾತನಾಡಿದರು.

ಅಬ್ದುಲ್ ಸಮದ್ ಮತ್ತು ಬಳಗದಿಂದ ಬ್ಯಾರಿ ಕವಾಲಿ, ಮುಹಮ್ಮದ್ ಫೈಝ್ ಮತ್ತು ಬಳಗದಿಂದ ಬ್ಯಾರಿ ಸಂಗೀತ ರಸಮಂಜರಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News