ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ‘ಎಂಜಿಎಂ ಪುಸ್ತಕೋತ್ಸವ’

Update: 2021-03-05 15:15 GMT

ಉಡುಪಿ, ಮಾ.5: ಉಡುಪಿ ಎಂಜಿಎಂ ಕಾಲೇಜಿನ ಲೈಬರ್ರಿ ಮತ್ತು ಇನ್‌ಫರ್ಮೇಶನ್ ಸೆಂಟರ್ ವತಿಯಿಂದ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸ ಲಾದ ಎರಡು ದಿನಗಳ ಪುಸ್ತಕ ಪ್ರದರ್ಶನ ಮತ್ತು ಮಾರಾಟ ‘ಎಂಜಿಎಂ ಪುಸ್ತಕೋತ್ಸವ’ಕ್ಕೆ ಇಂದು ಚಾಲನೆ ನೀಡಲಾಯಿತು.

ನವಕರ್ನಾಟಕ, ಮಣಿಪಾಲ್ ಯೂನಿವರ್ಸಲ್ ಪ್ರೆಸ್, ಭಾರತ್ ಬುಕ್ ಮಾರ್ಕ್, ಬಿಬ್ಲಿಯೋಸ್, ಸ್ಕೂಲ್ ಬುಕ್ ಕಂಪೆನಿ ಸೇರಿದಂತೆ ಒಟ್ಟು 15 ಪುಸ್ತಕ ಮಳಿಗೆಗಳು ಪುಸ್ತಕೋತ್ಸವದಲ್ಲಿ ಇದ್ದವು. ಇದರೊಂದಿಗೆ ಕಾಲೇಜಿನ ಪ್ರಾಂಶು ಪಾಲರು, ಉಪನ್ಯಾಸಕರು ಬರೆದ ಪುಸ್ತಕಗಳ ಮಳಿಗೆ ಹಾಗೂ ಸ್ಥಳೀಯ ಲೇಖಕರ ಪುಸ್ತಕಗಳ ಮಳಿಗೆಯೂ ಇಲ್ಲಿ ಕಂಡುಬಂದವು. ಇಲ್ಲಿ ಶೇ.10ರಿಂದ 70ರವರೆಗೂ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮಾಡಲಾಗುತ್ತಿದೆ.

ಪುಸ್ತಕೋತ್ಸವದಲ್ಲಿ ವಿದ್ಯಾರ್ಥಿಗಳು ಮುಗಿ ಬಿದ್ದು ಪುಸ್ತಕ ಖರೀದಿಸಿದರು. ಮನಸ್ಸಿಗೆ ಸಂಬಂಧಿಸಿದ, ಮಾನಸಿಕ ಖಾಯಿಲೆ ಕುರಿತು ಹಾಗೂ ಪ್ರೇರಣಾ ಕಥೆಗಳು, ಜೀವನ ಚರಿತ್ರೆಯ ಪುಸ್ತಕಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಒಲವು ತೋರಿಸಿದರು. ಇಂತಹ ಪುಸ್ತಕಗಳೇ ಹೆಚ್ಚಿನ ಸಂಖ್ಯೆ ಯಲ್ಲಿ ಮಾರಾಟವಾದವು ಎಂದು ಪುಸ್ತಕ ಮಳಿಗೆಯವರು ತಿಳಿಸಿದರು.

ಪುಸ್ತಕೋತ್ಸವ ಉದ್ಘಾಟನೆ: ಪುಸ್ತಕೋತ್ಸವವನ್ನು ಉದ್ಘಾಟಿಸಿದ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಪುಸ್ತಕದ ಓದುವ ಹವ್ಯಾಸವು ನಮ್ಮ ವ್ಯಕ್ತಿತ್ವವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುತ್ತದೆ. ಮಕ್ಕಳಿಗೆ ಬಾಲ್ಯ ದಲ್ಲಿಯೇ ಪುಸ್ತಕ ಕೊಂಡುಕೊಳ್ಳುವ ಆಸಕ್ತಿಯನ್ನು ಬೆಳೆಸಬೇಕಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ದೇವದಾಸ್ ನಾಯಕ್ ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ, ವಿರ್ದಾರ್ಥಿ ಕ್ಷೇಮಪಾಲನಾಧಿಕಾರಿ ರಮೇಶ್ ಕಾರ್ಲ, ಅರುಣ್ ಕುಮಾರ್ ಉಪಸ್ಥಿತರಿದ್ದರು. ಮುಖ್ಯ ಗ್ರಂಥಪಾಲಕ ಕಿಶೋರ್ ಎಚ್.ವಿ. ಸ್ವಾಗತಿ ಸಿದರು. ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಪುಸ್ತಕ ಮಾರಾಟಕ್ಕಾಗಿ ಆಕರ್ಷಕ ತಂತ್ರ

ಪುಸ್ತಕ ಮಾರಾಟಕ್ಕಾಗಿ ವಿವಿಧ ಆಕರ್ಷಕ ತಂತ್ರಗಳನ್ನು ವಿದ್ಯಾರ್ಥಿಗಳೇ ರೂಪಿಸಿರುವುದು ಈ ಪುಸ್ತಕೋತ್ಸವದಲ್ಲಿ ಕಂಡುಬಂತು. ನಿಮಗೆ ನೀವೇ ಪುಸ್ತಕ ಕೊಡುಗೆ ನೀಡುವ ‘ಎ ಗಿಫ್ಟ್ ಟು ಯುವರ್ ‌ಸೆಲ್ಫ್’ ಕೌಂಟರ್ ಗಮನ ಸೆಳೆಯಿತು. ಇಲ್ಲಿ ಗಿಫ್ಟ್ ಪ್ಯಾಕ್ ಮಾಡಿರುವ ಪುಸ್ತಕದ ಮೇಲೆ ಪುಸ್ತಕದೊಳಗಿನ ವಿಚಾರ ಮತ್ತು ಲೇಖಕರ ಹೆಸರನ್ನು ಬರೆಯಲಾಗಿತ್ತು. ಇದರಲ್ಲಿ ಯಾವುದಾದರೊಂದನ್ನು ಪಡೆದುಕೊಳ್ಳುವ ಮೂಲಕ ಆ ಪುಸ್ತಕ ವನ್ನು ತಮಗೆ ತಾವೇ ಗಿಫ್ಟ್ ಆಗಿ ನೀಡುವ ಪರಿಕಲ್ಪನೆ ಇದಾಗಿದೆ.

ಅದೇ ರೀತಿ ಕಾಲೇಜಿನ ಉಪನ್ಯಾಸಕ ಮಂಜುನಾಥ್ ಕಾಮತ್ ಬರೆದ ಮೂರು ಪುಸ್ತಕಗಳ ಕೊಂಬೋ ಖರೀದಿಸಿದರೆ, ಅದರೊಂದಿಗೆ ಮಾಸ್ಕ್ ಮತ್ತು ಬಟ್ಟೆ ಚೀಲವನ್ನು ಉಚಿತವಾಗಿ ನೀಡಲಾಗುತ್ತದೆ

ಕನ್ನಡ ಶಾಲೆಯ ಗ್ರಂಥಾಲಯಕ್ಕಾಗಿ ಪುಸ್ತಕ ದಾನ

ಇಲ್ಲೊಂದು ವಿಶೇಷ ಕೌಂಟರ್ ರಚಿಸಲಾಗಿದೆ. ಅದರಲ್ಲಿ ಎರಡು ಬಾಕ್ಸ್ ಗಳನ್ನು ಇಡಲಾಗಿದೆ. ಅದಕ್ಕೆ ಯಾರು ಬೇಕಾದರು ಹೊಸ ಅಥವಾ ಹಳೆಯ ಪುಸ್ತಕಗಳನ್ನು ಹಾಕಬಹುದು. ಆ ಪುಸ್ತಕ ಮುಂದೆ ಸ್ಥಳೀಯ ಕನ್ನಡ ಶಾಲೆಯ ಗ್ರಂಥಾಲಯವನ್ನು ಸೇರಲಿದೆ. ಇದು ಈ ಪುಸ್ತಕೋತ್ಸವದ ವಿಶೇಷತೆಯಲ್ಲಿ ಒಂದು.

ಪುಸ್ತಕೋತ್ಸವದಲ್ಲಿ ಖರೀದಿಸಿರುವ ಅಥವಾ ತಮ್ಮಲ್ಲಿರುವ ಹಳೆ ಪುಸ್ತಕವನ್ನು ದಾನವಾಗಿ ನೀಡಿದರೆ ಅದನ್ನು ಸ್ಥಳೀಯ ಕನ್ನಡ ಮಾಧ್ಯಮ ಶಾಲೆಯ ಗ್ರಂಥಾಲ ಯಕ್ಕೆ ನೀಡುವ ಯೋಜನೆ ಆಯೋಜಕರದ್ದಾಗಿದೆ. ಈಗಾಗಲೇ ನೂರಾರು ಪುಸ್ತಕಗಳು ಈ ಬಾಕ್ಸ್‌ಗಳನ್ನು ತುಂಬಿ ಕೊಂಡಿರುವುದು ಕಂಡುಬಂತು. ಅದೇ ರೀತಿ ಪುಸ್ತಕ ಖರೀದಿಸಿದವರು ತಮ್ಮ ಪುಸ್ತಕದೊಂದಿಗೆ ಸೆಲ್ಫಿ ತೆಗೆಯುವಂತಹ ಕೌಂಟರ್ ಕೂಡ ಇಲ್ಲಿ ಸ್ಥಾಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News