ಸರಕಾರಿ ಕಾರ್ಯಕ್ರಮಕ್ಕೆ ತನ್ನ ಸಹೋದರನನ್ನು ಕಳುಹಿಸಿಕೊಟ್ಟು ವಿವಾದಕ್ಕೀಡಾದ ಸಚಿವ!

Update: 2021-03-05 15:51 GMT
Photo: Twitter(@ani)

ಪಾಟ್ನಾ: ಬಿಹಾರ ಸಚಿವ ಮುಕೇಶ್ ಸಹಾನಿ ವೈಶಾಲಿ ಜಿಲ್ಲೆಯ ಹಾಜಿಪುರ ನಗರದಲ್ಲಿ ನಡೆದಿದ್ದ ಸರಕಾರಿ ಕಾರ್ಯಕ್ರಮಕ್ಕೆ ತಾನು ತೆರಳದೆ ತನ್ನ ಸಹೋದರನನ್ನು ಸರಕಾರಿ ವಾಹನದಲ್ಲಿ ಕಳುಹಿಸಿಕೊಟ್ಟಿದ್ದು ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಪಕ್ಷಗಳಾದ ಆರ್‌ಜೆಡಿ ಹಾಗೂ ಕಾಂಗ್ರೆಸ್ ಒತ್ತಾಯಿಸಿವೆ.

"ನನ್ನ ಸಹೋದರ ಮುಕೇಶ್ ತುಂಬಾ ಬ್ಯುಸಿಯಾಗಿದ್ದರು. ಹೀಗಾಗಿ ಅವರ ಪ್ರತಿನಿಧಿಯಾಗಿ ನಾನು ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ'' ಎಂದು ಸಚಿವರ ಸಹೋದರ ಸಂತೋಷ್ ಕುಮಾರ್ ಸಹಾನಿ ಹೇಳಿದ್ದಾರೆ.

   “ನನಗೆ ಈ ಕುರಿತು ಏನೂ ಗೊತ್ತಿಲ್ಲ. ಇದು ನಿಜವೇ ಆಗಿದ್ದರೆ ಆಘಾತಕಾರಿ ವಿಚಾರ. ಇಂತಹದ್ದೆಲ್ಲ ನಡೆಯಬಾರದು’’ ಎಂದು ವಿಧಾನಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಕ್ರಿಯೆ ನೀಡಿದರು.

ಮುಕೇಶ್ ಸಹಾನಿಯ ರಾಜೀನಾಮೆ ನೀಡಬೇಕು, ಅವರ ಸಹೋದರನನ್ನು ಬಂಧಿಸಿ ಕಾರ್ಯಕ್ರಮದಲ್ಲಿದ್ದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ವಿಪಕ್ಷಗಳು ಬೇಡಿಕೆ ಇಟ್ಟ ಬಳಿಕ ನಿತೀಶ್ ಕುಮಾರ್ ಸದನದಲ್ಲಿ ಉತ್ತರಿಸಿದರು.

" ವಿಧಾನಸಭಾ ಕಲಾಪದ ಹಿನ್ನೆಲೆಯಲ್ಲಿ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಪಕ್ಷದ ಅಧ್ಯಕ್ಷನಾಗಿ ನನ್ನ ಸಹೋದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾನೆ. ಆದರೆ ಅವನನ್ನು ಅಲ್ಲಿಗೆ ಕಳುಹಿಸುವ ಉದ್ದೇಶ ನನಗಿರಲಿಲ್ಲ. ಇದು ಮತ್ತೊಮ್ಮೆ ನಡೆಯಲಾರದು ಎಂದು ಭರವಸೆ ನೀಡುವೆ'' ಎಂದು ಬಿಹಾರದ ಸಚಿವ ಮುಕೇಶ್ ಸಹಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News