ಉಡುಪಿ: ಕರ್ನಾಟಕ ರಾಷ್ಟ್ರ ಸಮಿತಿಯಿಂದ 'ಲಂಚಮುಕ್ತ ಕರ್ನಾಟಕ ಅಭಿಯಾನ'

Update: 2021-03-05 15:26 GMT

ಉಡುಪಿ, ಮಾ.5: ರವಿಕೃಷ್ಣಾ ರೆಡ್ಡಿ ಅವರ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ‘ಲಂಚಮುಕ್ತ ಕರ್ನಾಟಕ’ ಅಭಿಯಾನ ಶನಿವಾರ ಉಡುಪಿ ಜಿಲ್ಲೆಗೆ ಆಗಮಿಸಲಿದ್ದು, ಇಲ್ಲಿನ ತಾಲೂಕು ಕಚೇರಿ ಹಾಗೂ ಸಬ್-ರಿಜಿಸ್ಟ್ರಾರ್ ಕಚೇರಿಗಳಿಗೆ ಭೇಟಿ ನೀಡಿ ಲಂಚಮುಕ್ತ ಅಭಿಯಾನ ನಡೆಸಲಿದೆ ಎಂದು ಪಕ್ಷದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಕಿರಣ್‌ ಕುಮಾರ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷವು ಸ್ವಚ್ಛ, ಪ್ರಾಮಾಣಿಕ ಹಾಗೂ ಜನಪರ ರಾಜಕಾರಣಕ್ಕಾಗಿ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದೆ. ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಹಲವಾರು ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದಿದೆ ಎಂದವರು ಹೇಳಿದರು.

ಉಡುಪಿ ತಾಲೂಕು ಕಚೇರಿಯಲ್ಲಿ ತಾಲೂಕಿನ ಯಾವುದೇ ನಾಗರಿಕರಿಗೆ ತಮ್ಮ ಕಾನೂನುಬದ್ಧ ಕೆಲಸವನ್ನು ಮಾಡಿಕೊಡದೇ ಅಧಿಕಾರಿಗಳು ಸತಾಯಿಸುತಿದ್ದರೆ ಅಥವಾ ಲಂಚ ಕೇಳುತಿದ್ದರೆ, ನಾಳೆ ಬೆಳಗ್ಗೆ 10:30ಕ್ಕೆ ತಾಲೂಕು ಕಚೇರಿ ಬಳಿ ಬಂದು ಅಲ್ಲಿರುವ ಪಕ್ಷದ ಪದಾಧಿಕಾರಿ ಗಳನ್ನು ಸಂಪರ್ಕಿಸುವಂತೆ ಅವರು ಮನವಿ ಮಾಡಿದರು.

ಕೆಆರ್‌ಎಸ್ ಪಕ್ಷವು ಮುಂದಿನ ತಾಲೂಕು ಹಾಗೂ ಜಿಪಂ ಚುನಾವಣೆಯಲ್ಲಿ ರಾಜ್ಯಾದ್ಯಂತ ಸ್ಪರ್ಧಿಸಲಿದೆ ಎಂದೂ ಕಿರಣ್‌ಕುಮಾರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ಮಮತಾ, ರೇಶ್ಮಾ, ಸಂಧ್ಯಾ, ಸಲೀಂ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News