ಉಡುಪಿ: ಮಾ.6ರಿಂದ ಮಹಿಳೆಯರಿಗೆ ಉಚಿತ ಗರ್ಭಕೊರಳಿನ ಕ್ಯಾನ್ಸರ್ ತಪಾಸಣಾ ಶಿಬಿರ

Update: 2021-03-05 15:29 GMT

ಉಡುಪಿ, ಮಾ.5: ಭಾರತೀಯ ಮಹಿಳೆಯರಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುವ ಕ್ಯಾನ್ಸರ್ ರೋಗವಾದ ಗರ್ಭಕೊರಳಿನ ಕ್ಯಾನ್ಸರ್‌ನ ಉಚಿತ ತಪಾಸಣಾ ಶಿಬಿರವು ಮಾ.6ರಿಂದ 8ರವರೆಗೆ ಜಿಲ್ಲೆಯ 20 ಸರಕಾರಿ ಹಾಗೂ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ನಡೆಯಲಿದೆ.

ಮಣಿಪಾಲ ಸ್ತ್ರೀರೋಗ ತಜ್ಞರ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಈ ಉಚಿತ ತಪಾಸಣಾ ಶಿಬಿರವನ್ನು ಆಯೋಜಿ ಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ.ಕೃಷ್ಣಾನಂದ ಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಮಾನ್ಯವಾಗಿ 30ರಿಂದ 60 ವರ್ಷ ಪ್ರಾಯದ ಮಹಿಳೆಯರಲ್ಲಿ ಈ ರೋಗ ಹೆಚ್ಚಾಗಿ ಕಂಡುಬರುತ್ತದೆ. ಅಂಕಿಅಂಶಗಳ ಪ್ರಕಾರ ಪ್ರತಿ ವರ್ಷ ಭಾರತದಲ್ಲಿ 1,23,000 ಮಹಿಳೆಯರು ಗರ್ಭಕೊರಳಿನ ಕ್ಯಾನ್ಸರ್‌ಗೆ ತುತ್ತಾಗುತಿದ್ದು, ಇವರಲ್ಲಿ 74,000 ಮಂದಿ ಕಾಯಿಲೆಯಿಂದ ಸಾವನ್ನಪ್ಪುತಿ ದ್ದಾರೆ. ಪ್ರಾರಂಭಿಕ ಹಂತದಲ್ಲೇ ಇದನ್ನು ಪತ್ತೆ ಹಚ್ಚಿದರೆ, ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಇದಕ್ಕೆ ಪರಿಣಾಮಕಾರಿಯಾದ ಲಸಿಕೆಯೂ ಲಭ್ಯವಿದೆ ಎಂದು ಡಾ.ಮಯ್ಯ ತಿಳಿಸಿದರು.

ಕ್ಯಾನ್ಸರ್ ಪೂರ್ವ ಹಂತದಲ್ಲಿ ಗರ್ಭಕೊರಳ ಕ್ಯಾನ್ಸರ್‌ನ್ನು ಪತ್ತೆ ಹಚ್ಚಲು ಸರಳವಾದ ‘ಪ್ಯಾಪ್ ಸ್ಮಿಯರ್’ ಪರೀಕ್ಷೆ ಇದ್ದು, ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳುವ 10ರಿಂದ 15 ವರ್ಷ ಪೂರ್ವದಲ್ಲೇ ಇದರ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಪರೀಕ್ಷೆಯಿಂದ ಇದನ್ನು ಸುಲಭವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ, ಜೀವಕೋಶ ಕ್ಯಾನ್ಸರ್‌ಗೆ ತುತ್ತಾಗುವುದನ್ನು ತಡೆಗಟ್ಟಬಹುದು ಎಂದರು.

ಹೀಗಾಗಿ 25ರಿಂದ 60 ವರ್ಷದೊಳಗಿನ ಮಹಿಳೆಯರು ಈ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. 1,200ರೂ.ನಿಂದ 1,500ರೂ. ವೆಚ್ಚ ತಗಲುವ ಈ ಪರೀಕ್ಷೆ, ಸಂಘದ ವತಿಯಿಂದ ನಡೆಯುವ ಮೂರು ದಿನಗಳ ಶಿಬಿರದಲ್ಲಿ ಉಚಿತವಾಗಿರು ತ್ತದೆ ಎಂದರು. 26 ವರ್ಷದೊಳಗಿನ ಯುವತಿಯರು ಇದಕ್ಕಿರುವ ವ್ಯಾಕ್ಸಿನ್‌ನ್ನು ಪಡೆದುಕೊಳ್ಳಬಹುದು. ಇದರ ಸಫಲತೆ ಶೇ.99.3ರಷ್ಟಿದೆ ಎಂದರು.

ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ, ಹೆಬ್ರಿ, ತಾಲೂಕು ಆಸ್ಪತ್ರೆ ಕಾರ್ಕಳ, ಮಣಿಪಾಲದ ಕೆಎಂಸಿ, ಸೋನಿಯಾ ಕ್ಲಿನಿಕ್, ಉಡುಪಿಯ ಡಾ.ಎ.ವಿ.ಬಾಳಿಗಾ, ಡಾ.ಟಿಎಂಎ ಪೈ, ಸಿಟಿ ಆಸ್ಪತ್ರೆ, ಹೈಟೆಕ್, ಗಾಂಧಿ, ಕುಂದಾಪುರದ ಮನೀಶ್, ಆದರ್ಶ, ವಿವೇಕ್, ನವಮಾಸ ಮಹಿಳಾ ಸ್ಪೆಷಲಿಟಿ ಕ್ಲಿನಿಕ್ ಸೇರಿದಂತೆ ಇತರ ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆಗೆ ಅವಕಾಶವಿದೆ ಎಂದು ಡಾ.ಮಯ್ಯ ಹೇಳಿದರು.
ಸಂಘದ ಕಾರ್ಯದರ್ಶಿ ಡಾ.ರಾಜಲಕ್ಷ್ಮೀ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News