ವಿಮಾನ ಟೇಕ್ ಆಫ್ ಗೆ ಕೆಲವೇ ಕ್ಷಣಗಳ ಮುನ್ನ ತಾನು ಕೋವಿಡ್ ಸೋಂಕಿತ ಎಂದ ಪ್ರಯಾಣಿಕ

Update: 2021-03-05 15:33 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಮಾ.5: ಇಂಡಿಗೋ ವಿಮಾನವೊಂದು ಟೇಕ್ ಆಫ್ ಆಗುವ ಕೆಲವೇ ಕ್ಷಣಗಳ ಮುನ್ನ ಅದರಲ್ಲಿದ್ದ ಪ್ರಯಾಣಿಕನೋರ್ವ ತನಗೆ ಕೋವಿಡ್-19 ಸೋಂಕು ಇದೆ ಎಂದು ತಿಳಿಸಿದ ಬಳಿಕ ಪೈಲಟ್ ಇತರ ಪ್ರಯಾಣಿಕರ ಸುರಕ್ಷತೆಗಾಗಿ ವಿಮಾನವನ್ನು ಪಾರ್ಕಿಂಗ್ ಪ್ರದೇಶಕ್ಕೆ ವಾಪಸ್ ತಂದ ಘಟನೆ ದಿಲ್ಲಿಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಪುಣೆಗೆ ಪ್ರಯಾಣ ಆರಂಭಿಸಲು ವಿಮಾನವು ಸಜ್ಜಾಗುತ್ತಿದ್ದಾಗ ತಾನು ಕೋವಿಡ್-19 ಪಾಸಿಟಿವ್ ಎಂದು ಸಿಬ್ಬಂದಿಗಳಿಗೆ ತಿಳಿಸಿದ್ದ ವ್ಯಕ್ತಿಯು,ಅದನ್ನು ಸಾಬೀತುಗೊಳಿಸಲು ದಾಖಲೆಗಳನ್ನೂ ತೋರಿಸಿದ್ದ. ವ್ಯಕ್ತಿಯು ಕುಳಿತಿದ್ದ ಸಾಲು ಸೇರಿದಂತೆ ಮೂರು ಸಾಲುಗಳಲ್ಲಿ ಆಸೀನರಾಗಿದ್ದ ಪ್ರಯಾಣಿಕರನ್ನು ಮೊದಲು ಕೆಳಗಿಳಿಸಿದ ವಿಮಾನದ ಸಿಬ್ಬಂದಿಗಳು ಅವರನ್ನು ಕಂಟೈನ್ಮೆಂಟ್‌ಗೆ ಕಳುಹಿಸಿದ್ದಾರೆ. ಆಸನಗಳಿಗೆ ಸೋಂಕು ನಿವಾರಕವನ್ನು ಸಿಂಪಡಿಸಿ ಅವುಗಳ ಹೊದಿಕೆಗಳನ್ನು ಬದಲಿಸಿದ ಬಳಿಕವೇ ವಿಮಾನವು ಮತ್ತೆ ಪ್ರಯಾಣವನ್ನು ಆರಂಭಿಸಿತು. ಎಲ್ಲ ಪ್ರಯಾಣಿಕರಿಗೆ ಪಿಪಿಇ ಕಿಟ್‌ಗಳನ್ನು ಒದಗಿಸಲಾಗಿದ್ದು,ಪ್ರಯಾಣದುದ್ದಕ್ಕೂ ಅವುಗಳನ್ನು ಧರಿಸಿಕೊಂಡಿರುವಂತೆ ಸೂಚಿಸಲಾಗಿತ್ತು.

ಸೋಂಕಿತ ಪ್ರಯಾಣಿಕನನ್ನು ಸಫ್ದರ್‌ಜಂಗ್ ಆಸ್ಪತ್ರೆಯ ಕೋವಿಡ್ ವಾರ್ಡ್‌ಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News