ಒಟಿಟಿ ನಿಯಮಕ್ಕೆ ಹಲ್ಲುಗಳಿಲ್ಲ ಎಂದ ಸುಪ್ರೀಂ ಕೋರ್ಟ್

Update: 2021-03-05 17:34 GMT

ಹೊಸದಿಲ್ಲಿ, ಮಾ. 3: ಸಾಮಾಜಿಕ ಮಾಧ್ಯಮ ಹಾಗೂ ಒಟಿಟಿ ವೇದಿಕೆಯ ಕುರಿತ ಸರಕಾರದ ನಿಯಮಾವಳಿಗೆ ಹಲ್ಲುಗಳಿಲ್ಲ ಹಾಗೂ ಅದಕ್ಕೆ ವಿಚಾರಣೆ ನಡೆಸುವ ಅಧಿಕಾರ ಕೂಡ ಇಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ವೆಬ್ ಸರಣಿ ‘ತಾಂಡವ್’ ವಿರುದ್ಧ ನಡೆಯುತ್ತಿರುವ ತನಿಖೆಯಲ್ಲಿ ಅಮೆಝಾನ್ ಪ್ರೈಮ್ ವೀಡಿಯೊದ ಭಾರತದ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಅವರಿಗೆ ಬಂಧನದಿಂದ ರಕ್ಷಣೆ ನೀಡಿ ಆದೇಶಿಸಿದ ಸಂದರ್ಭ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‘‘ಸಾಮಾಜಿಕ ಮಾಧ್ಯಮದ ವೇದಿಕೆಯನ್ನು ನಿಯಂತ್ರಿಸಲು ಯಾವುದೇ ಕಾರ್ಯವಿಧಾನ ಇಲ್ಲ. ಕಾನೂನು ಇಲ್ಲದೆ ನೀವು (ಸರಕಾರ) ಅವುಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ’’ ಎಂದು ನಿರೀಕ್ಷಣಾ ಜಾಮೀನು ನಿರಾಕರಿಸಿ ಅಲಹಾಬಾದ್ ಉಚ್ಚ ನ್ಯಾಯಾಲಯ ಫೆಬ್ರವರಿ 25ರಂದು ನೀಡಿದ್ದ ಆದೇಶದ ವಿರುದ್ಧ ಅಪರ್ಣಾ ಪುರೋಹಿತ್ ಅವರು ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ಹೇಳಿತು. ‘ತಾಂಡವ್’ ಸರಣಿಗಳ ಕುರಿತಂತೆ ಅಪರ್ಣಾ ಪುರೋಹಿತ್ ಅವರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ ಕುರಿತು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಹಾಗೂ ಆರ್.ಎಸ್. ರೆಡ್ಡಿ ಅವರನ್ನೊಳಗೊಂಡ ನ್ಯಾಯ ಪೀಠ ಉತ್ತರಪ್ರದೇಶ ಸರಕಾರಕ್ಕೆ ನೋಟಿಸು ಜಾರಿ ಮಾಡಿತು. ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುವ ವೀಡಿಯೊ ವಿಷಯಗಳನ್ನು ಪರಿಶೀಲನೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶಿಸಿತ್ತು. ಅವುಗಳಲ್ಲಿ ಕೆಲವು ಬಾರಿ ಅಶ್ಲೀಲ ವಿಷಯಗಳನ್ನು ಕೂಡ ಪ್ರದರ್ಶಿಸಲಾಗುತ್ತದೆ. ಆದುದರಿಂದ ಇಂತಹ ಕಾರ್ಯಕ್ರಮಗಳನ್ನು ಪರಿಶೀಲಿಸಲು ಕಾರ್ಯವಿಧಾನದ ಅಗತ್ಯತೆ ಇದೆ ಅದು ಹೇಳಿತ್ತು. ಸಾಮಾಜಿಕ ಮಾಧ್ಯಮದ ವೇದಿಕೆಗಳನ್ನು ನಿಯಂತ್ರಿಸಲು ಸರಕಾರದ ಇತ್ತೀಚಿಗೆ ಮಾರ್ಗಸೂಚಿಗಳನ್ನು ತನ್ನ ಮುಂದೆ ಸಲ್ಲಿಸುವಂತೆ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.

ಇಂದು ಸುಪ್ರೀಂ ಕೋರ್ಟ್, ಸಾಮಾಜಿಕ ಮಾಧ್ಯಮ ಕುರಿತ ಕೇಂದ್ರ ಸರಕಾರದ ನಿಯಮಗಳು ಕೇವಲ ಮಾರ್ಗಸೂಚಿಗಳಾಗಿ ಮಾತ್ರ ಉಳಿದಿವೆ. ಡಿಜಿಟಲ್ ವೇದಿಕೆ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಇದರಲ್ಲಿ ಅವಕಾಶ ಇಲ್ಲ ಎಂದು ಪ್ರತಿಪಾದಿಸಿದೆ. ನಾವು ನಿಮ್ಮ ನಿಯಮಾವಳಿಗಳನ್ನು ಪರಿಶೀಲಿಸಿದೆವು. ಈ ನಿಯಮಾವಳಿಗೆ ಹಲ್ಲೇ ಇಲ್ಲ. ಇದನ್ನು ವಿಚಾರಣೆ ನಡೆಸುವ ಅಧಿಕಾರ ಇಲ್ಲ. ಹಿಂಸಾಚಾರವನ್ನು ನಿಯಂತ್ರಿಸುವ ಕಾರ್ಯ ವಿಧಾನ ಇಲ್ಲ ಎಂದು ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರು ಕೇಂದ್ರ ಸರಕಾರ ಸಲ್ಲಿಸಿದ ನಿಯಮವಾಳಿಗಳನ್ನು ಪರಿಶೀಲಿಸಿ ಹೇಳಿದರು. ಕಠಿಣ ನಿಯಮಾವಳಿಗಳೊಂದಿಗೆ ಹೊಸ ಪ್ರಸ್ತಾವವನ್ನು ಸಲ್ಲಿಸುವಂತೆ ನ್ಯಾಯಮೂರ್ತಿ ಭೂಷಣ್ ಅವರು ಕೇಂದ್ರ ಸರಕಾರಕ್ಕೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘‘ಸೂಕ್ತ ಕ್ರಮಗಳ ಬಗ್ಗೆ ಸರಕಾರ ಪರಿಶೀಲನೆ ನಡೆಸಲಿದೆ. ಡಿಜಿಟಲ್ ವೇದಿಕೆಯ ಮೇಲಿನ ಯಾವುದೇ ನಿಯಂತ್ರಣವನ್ನು ನ್ಯಾಯಾಲಯದ ಮುಂದಿರಿಸಲಾಗುವುದು’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News