ಅಯೋಧ್ಯೆ ಯಾತ್ರಿಗಳಿಗೆ ಅತಿಥಿಗೃಹ ನಿರ್ಮಿಸಲು ವಿದೇಶಗಳಿಗೆ ಉ.ಪ್ರದೇಶ ಸರಕಾರದ ಅನುಮತಿ

Update: 2021-03-05 17:12 GMT
ಸಾಂದರ್ಭಿಕ ಚಿತ್ರ

ಲಕ್ನೋ,ಮಾ.5: ಅಯೋಧ್ಯೆಯಲ್ಲಿ ತಮ್ಮ ಅತಿಥಿಗೃಹಗಳ ನಿರ್ಮಾಣಕ್ಕಾಗಿ ಡಝನ್‌ಗೂ ಅಧಿಕ ದೇಶಗಳ ಅರ್ಜಿಗಳಿಗೆ ಉತ್ತರ ಪ್ರದೇಶ ಸರಕಾರವು ಸಕಾರಾತ್ಮಕವಾಗಿ ಸ್ಪಂದಿಸಿದೆ. ಅಂತರರಾಷ್ಟ್ರೀಯ ಧಾರ್ಮಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಮತ್ತು ಜಾಗತಿಕ ಪ್ರವಾಸಿ ನಕಾಶೆಯಲ್ಲಿ ಅಯೋಧ್ಯೆಗೆ ಸ್ಥಾನವನ್ನು ಕಲ್ಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳಿರುವ ದೇಶಗಳು ಅಲ್ಲಿ ತಮ್ಮ ಆಸ್ತಿಗಳನ್ನು ನಿರ್ಮಿಸಲು ಸರಕಾರವು ಅನುಮತಿ ನೀಡಿದೆ.

ಶ್ರೀಲಂಕಾ, ಕೆನಡಾ, ನೇಪಾಳ, ಸುರಿನಾಮ್, ಫಿಝಿ, ಕೆನ್ಯಾ,ಇಂಡೋನೇಷ್ಯಾ, ಮಲೇಷ್ಯಾ, ಟ್ರಿನಿದಾದ್ ಮತ್ತು ಟೊಬ್ಯಾಗೊ, ಮಾರಿಷಸ್, ಥೈಲ್ಯಾಂಡ್ ಮತ್ತು ಕೊರಿಯಾ ಅತಿಥಿಗೃಹ ನಿರ್ಮಾಣದ ಪ್ರಸ್ತಾವಗಳನ್ನು ಸಲ್ಲಿಸಿರುವ ದೇಶಗಳಲ್ಲಿ ಸೇರಿವೆ.

ಬೌದ್ಧಧರ್ಮೀಯರ ಪ್ರಮುಖ ಯಾತ್ರಾ ಸ್ಥಳವಾಗಿರುವ ಖುಷಿನಗರದಲ್ಲಿ ಈಗಾಗಲೇ ಹಲವಾರು ದೇಶಗಳು ತಮ್ಮ ಅತಿಥಿಗೃಹಗಳನ್ನು ಹೊಂದಿವೆ. ಚೀನಾ,ಜಪಾನ್,ಕೊರಿಯಾ,ಶ್ರೀಲಂಕಾ ಮತ್ತು ಥೈಲ್ಯಾಂಡ್ ಈ ದೇಶಗಳಲ್ಲಿ ಸೇರಿವೆ.

ವಿದೇಶಗಳಿಂದ ಭೇಟಿ ನೀಡುವವರಿಗಾಗಿ ಅತಿಥಿಗೃಹಗಳ ನಿರ್ಮಾಣಕ್ಕಾಗಿ 12 ಎಕರೆ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ಯಾವುದೇ ದೇಶವು ಅರ್ಜಿಯನ್ನು ಸಲ್ಲಿಸಬಹುದು ಮತ್ತು ಅವುಗಳಿಗೆ ಜಾಗವನ್ನು ಲಭ್ಯವಾಗಿಸಲಾಗುವುದು ಎಂದು ಅಯೋಧ್ಯೆಯ ಮುನ್ಸಿಪಲ್ ಆಯುಕ್ತ ವಿಶಾಲ ಸಿಂಗ್ ತಿಳಿಸಿದರು.

ಯಾತ್ರಿಗಳಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚುಕಡಿಮೆ ದೇಶದ ಎಲ್ಲ ರಾಜ್ಯಗಳು ಬಯಸಿದ್ದು, ನವ ಅಯೋಧ್ಯೆ ನಗರವನ್ನು ಅಭಿವೃದ್ಧಿಗೊಳಿಸಲು ಅಯೋಧ್ಯೆಗೆ ಹೊಂದಿಕೊಂಡಿರುವ ಬರಹಟಾ,ಶಾನವಾಝ್‌ಪುರ ಮಾಝಾ ಮತ್ತು ತಿಹುರಾ ಮಝಾ ಗ್ರಾಮಗಳಲ್ಲಿ ಸುಮಾರು 1,200 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News